ನಾಗ್ಪುರ : ಭಾರತದ ಜನಸಂಖ್ಯೆ ನಿಯಂತ್ರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ದೇಶ ಒಡೆಯುವ ಭೀತಿ ಹೆಚ್ಚಾಗಲಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಲ್ಲಿ ಆತಂಕ ವ್ಯಕ್ತಪಡಿಸಿದರು.
ದೇಶದ ಎಲ್ಲ ಸಮುದಾಯದ ಜನರಿಗೂ ಈ ನೀತಿ ಕಡ್ಡಾಯ ಮಾಡಬೇಕು.
ಜನಸಂಖ್ಯೆ ಹೆಚ್ಚಾದಷ್ಟೂ ಹೊರೆ ಹೆಚ್ಚಾಗುತ್ತದೆ. ಜನಸಂಖ್ಯೆಯನ್ನು ಸರಿಯಾಗಿ ಬಳಸಿಕೊಂಡು ಸಂಪನ್ಮೂಲ ರೂಪಿಸಬೇಕು. 50 ವರ್ಷಗಳ ನಂತರ ಎಷ್ಟು ಜನರಿಗೆ ಆಹಾರ ಮತ್ತು ಸೌಕರ್ಯ ಒದಗಿಸಬಹುದು ಎಂಬುದನ್ನು ನಾವು ಗುರಿ ಹಾಕಿಕೊಳ್ಳಬೇಕು ಎಂದು ಹೇಳಿದರು.
ಆರ್‌ಎಸ್‌ಎಸ್ ಸಂಸ್ಥಾಪನಾ ದಿನದ ನಿಮಿತ್ತ ನಾಗ್ಪುರದಲ್ಲಿ ನಡೆದ ವಿಜಯದಶಮಿ ಹಬ್ಬದ ಉತ್ಸವದಲ್ಲಿ ಅವರು ಮಾತನಾಡಿದರು. ದೇಶದ ಜನಸಂಖ್ಯೆ ನಿಯಂತ್ರಣದ ಜತೆಗೆ ಧಾರ್ಮಿಕ ಆಧಾರದ ಮೇಲೆ ಜನಸಂಖ್ಯೆಯ ಸಮತೋಲನವೂ ಪ್ರಾಮುಖ್ಯತೆಯ ವಿಷಯವಾಗಿದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಮೋಹನ್ ಭಾಗವತ್ ಹೇಳಿದರು.
ಜನಸಂಖ್ಯೆಗೆ ಸಂಪನ್ಮೂಲಗಳು ಬೇಕಾಗುತ್ತವೆ. ಸಂಪನ್ಮೂಲಗಳನ್ನು ನಿರ್ಮಿಸದೆ ಜನಸಂಖ್ಯೆ ಬೆಳೆದರೆ ಅದು ಹೊರೆಯಾಗುತ್ತದೆ ಎಂದ ಅವರು, ಸಮಗ್ರ ಜನಸಂಖ್ಯಾ ನೀತಿಯನ್ನು ತರಬೇಕು. ಅದು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು. ಆಗ ಮಾತ್ರ ಜನಸಂಖ್ಯೆ ನಿಯಂತ್ರಣದ ಕ್ರಮಗಳು ಫಲ ನೀಡಲು ಸಾಧ್ಯ ಎಂದರು.
ಇದೇ ವೇಳೆ, ಆಯುಧ ಪೂಜೆಗೆ ಅತಿಥಿಯಾಗಿ ಆಗಮಿಸಿದ್ದ ಮಹಿಳಾ ಪರ್ವತಾರೋಹಿ ಸಂತೋಷ ಯಾದವ್ ಅವರನ್ನು ಮೋಹನ ಭಾಗ್ವತ್ ಶ್ಲಾಘಿಸಿದರು. ಆರ್‌ಎಸ್‌ಎಸ್ ಸಂಪ್ರದಾಯದಲ್ಲಿ ಬದಲಾವಣೆ ಮಾಡಿಕೊಂಡು ಇದೇ ಮೊದಲ ಬಾರಿಗೆ ಮಹಿಳೆಗೆ ಈ ಕಾರ್ಯಕ್ರಮದಲ್ಲಿ ಆಹ್ವಾನ ನೀಡಿರುವುದು ವಿಶೇಷ. ಎರಡು ಬಾರಿ ಮೌಂಟ್ ಎವರೆಸ್ಟ್ ಅನ್ನು ಏರಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಸಂತೋಷ.
ಮಹಿಳೆಯರಿಗೆ ಎಲ್ಲ ಸ್ಥಳಗಳಲ್ಲಿ ಸಮಾನ ಹಕ್ಕು ಸಿಗಬೇಕು. ನಿರ್ಧಾರಗಳನ್ನು ತಳೆಯುವ ಹಕ್ಕು ಅವರಿಗಿದೆ. ನಾಲ್ಕು ಗೋಡೆಗಳ ಮಧ್ಯೆ ಅವರನ್ನು ನಿರ್ಬಂಧಿಸುವುದು ಸರಿಯಲ್ಲ. ಮಾತೃಶಕ್ತಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಪುರುಷ ಮಾಡಲು ಸಾಧ್ಯವಿಲ್ಲ ಎಂದರು ಮೋಹನ್ ಭಾಗ್ವತ್ ಇದೇ ವೇಳೆ ಪ್ರತಿಪಾದಿಸಿದರು.