ಬೀಜಿಂಗ್: ಚೀನಾ ಅಧ್ಯಕ್ಷರಾಗಿ 69 ವರ್ಷದ ಷಿ ಜಿನ್‌ಪಿಂಗ್ ಸತತ 3ನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಭಾನುವಾರ (ಅ 23) ನಡೆದ ಈ ಐತಿಹಾಸಿಕ ಬೆಳವಣಿಗೆಯ ನಂತರ ಮಾತನಾಡಿದ ಅವರು, ‘ಜಗತ್ತಿಗೆ ಈಗ ಚೀನಾದ ಅಗತ್ಯವಿದೆ’ ಎಂದು ಘೋಷಿಸಿದರು.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸತತ ಮೂರನೇ ಅವಧಿಗೆ ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಈ ವಿಷಯವನ್ನು ಭಾನುವಾರ ಅಧಿಕೃತವಾಗಿ ಘೋಷಣೆ ಮಾಡಲಾಯಿತು. ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ(ಸಿಪಿಸಿ) 20ನೇ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜಿನ್‌ಪಿಂಗ್ ಅವರನ್ನು ಸಮಿತಿಯ ಮೊದಲ ಸರ್ವಸದಸ್ಯ ಸಭೆಯಲ್ಲಿ ಚುನಾಯಿಸಲಾಯಿತು ಎಂದು ಸುದ್ದಿ ಸಂಸ್ಥೆ ‘ಕ್ಸಿನುಹಾ’ ಭಾನುವಾರ ವರದಿ ಮಾಡಿದೆ.
ಜಿನ್‌ಪಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಅಧಿವೇಶನದಲ್ಲಿ 20ನೇ ಸಿಪಿಸಿ ಕೇಂದ್ರ ಸಮಿತಿಯ 203 ಸದಸ್ಯರು ಮತ್ತು 168 ಪರ್ಯಾಯ ಸದಸ್ಯರು ಭಾಗವಹಿಸಿದ್ದರು. ಅಧಿವೇಶನದಲ್ಲಿ ಸಿಪಿಸಿ ಕೇಂದ್ರ ಮಿಲಿಟರಿ ಕಮಿಷನ್‌ನ ಅಧ್ಯಕ್ಷರನ್ನಾಗಿಯೂ ಜಿನ್‌ಪಿಂಗ್ ಅವರನ್ನು ಹೆಸರಿಸಲಾಯಿತು.
ತಮ್ಮ ಅಯ್ಕೆ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿರುವ ಅಧ್ಯಕ್ಷ ಷಿ ಜಿನ್‌ಪಿಂಗ್, ‘ವಿಶ್ವವಿಲ್ಲದೇ ಚೀನಾ ಅಭಿವೃದ್ಧಿ ಹೊಂದಲಾರದು, ವಿಶ್ವಕ್ಕೆ ಚೀನಾ ಕೂಡ ಬೇಕು’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ತಮ್ಮ ಹಲವು ವಿಶ್ವಾಸ ಪಾತ್ರರನ್ನೂ ಷಿ ಜಿನ್‌ಪಿಂಗ್ ಇದೇ ಸಂದರ್ಭದಲ್ಲಿ ಪಕ್ಷದಲ್ಲಿ ಉನ್ನತ ಸ್ಥಾನಗಳಿಗೆ ತಂದಿದ್ದಾರೆ.
ಆಧುನಿಕ ಚೀನಾದ ಇತಿಹಾಸದಲ್ಲಿ ಮಾವೋ ತ್ಸೆ ತುಂಗ್ ಅವರ ನಂತರ ಅತ್ಯಂತ ಪ್ರಭಾವಿ ಮತ್ತು ಸುದೀರ್ಘ ಅವಧಿಗೆ ಚೀನಾದ ಅಧ್ಯಕ್ಷರಾದ ಶ್ರೇಯಕ್ಕೂ ಷಿ ಜಿನ್‌ಪಿಂಗ್ ಪಾತ್ರರಾಗಿದ್ದಾರೆ. ಜಗತ್ತು ಇಲ್ಲದೇ ಚೀನಾ ಪ್ರಗತಿ ಸಾಧಿಸುವುದಿಲ್ಲ, ಮತ್ತು ಜಗತ್ತಿಗೂ ಚೀನಾ ಬೇಕಿದೆ. ಸತತ 40 ವರ್ಷಗಳ ಸುಧಾರಣೆ ಮತ್ತು ಮುಕ್ತ ಆರ್ಥಿಕತೆಯ ಪರಿಶ್ರಮದಿಂದ ಚೀನಾ ಎರಡು ಅದ್ಭುತಗಳನ್ನು ಸಾಧಿಸಿದೆ. ಕ್ಷಿಪ್ರ ಆರ್ಥಿಕ ಪ್ರಗತಿ ಮತ್ತು ದೀರ್ಘಾವಧಿ ಸಾಮಾಜಿಕ ಸ್ಥಿರತೆಗೆ ಚೀನಾ ಮಾದರಿ ಎನಿಸಿದೆ’ ಎಂದು ಅವರು ಹೇಳಿದರು.
ಷಿ ಜಿನ್‌ಪಿಂಗ್ ಅವರ ಹೊಸ ತಂಡದಲ್ಲಿ ಪಕ್ಷದ ಶಾಂಘೈ ಘಟಕದ ಮಾಜಿ ಅಧ್ಯಕ್ಷ ಲಿ ಕಿಯಾಂಗ್ ಅವರನ್ನು ಹೊಸ ಪ್ರಧಾನ ಮಂತ್ರಿಯನ್ನಾಗಿ ಮಾಡಲಾಗಿದೆ ಬಿಬಿಸಿ ವರದಿ ಮಾಡಿದೆ. ತಮ್ಮ ಮೇಲೆ ವಿಶ್ವಾಸವಿಟ್ಟಿದ್ದಕ್ಕಾಗಿ ಜಿನ್‌ಪಿಂಗ್ ಸಿಪಿಸಿಗೆ ಧನ್ಯವಾದ ಅರ್ಪಿಸಿದ್ದಾರೆ. ದೇಶವು ‘ಸಮೃದ್ಧ ಸಮಾಜ’ ವನ್ನು ಸ್ಥಾಪಿಸುವ ಗುರಿಯನ್ನು ಸಾಧಿಸಿದೆ ಎಂದು ಅವರು ಹೇಳಿದ್ದಾರೆ.