ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಟಿವಿ, ವೆಬ್‌ಸೈಟ್‌ಗಳಲ್ಲಿ ಬೆಟ್ಟಿಂಗ್ ಜಾಹೀರಾತು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರ ಸೋಮವಾರ ಖಡಕ್ ಸೂಚನೆ ರವಾನಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, 'ಬೆಟ್ಟಿಂಗ್ ಸೈಟ್‌ಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸುದ್ದಿ ವೆಬ್‌ಸೈಟ್‌ಗಳು, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮತ್ತು ಖಾಸಗಿ ಉಪಗ್ರಹ ಚಾನೆಲ್‌ಗಳಿಗೆ ಸೂಚನೆ ನೀಡಿದೆ.
ಅಂತೆಯೇ ಈ ಸೂಚನೆಯನ್ನು ಉಲ್ಲಂಘಿಸಿದರೆ ಅದಕ್ಕೆ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಖಾಸಗಿ ಉಪಗ್ರಹ ದೂರದರ್ಶನ ಚಾನೆಲ್‌ಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಲಾಗಿದೆ.
ಡಿಜಿಟಲ್ ಮಾಧ್ಯಮ ಮತ್ತು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಈ ರೀತಿಯ ಬೆಟ್ಟಿಂಗ್ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕಾಗಿದೆ. ಸುದ್ದಿ ಮತ್ತು ಪ್ರಚಲಿತ ವಿಷಯಗಳನ್ನು ಪ್ರಕಟಿಸುವವರಿಗೆ ನೀಡಿರುವ ಪ್ರತ್ಯೇಕ ಸಲಹೆಯಲ್ಲಿ ಸಚಿವಾಲಯವು ಇದೇ ರೀತಿಯ ನಿರ್ದೇಶನವನ್ನು ನೀಡಿದೆ. ಬೆಟ್ಟಿಂಗ್ ಜಾಹೀರಾತುಗಳಿಗೆ ಸಂಬಂಧಿಸಿದ ಯಾವುದೇ ರೀತಿ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚಿಸಲಾಗಿದೆ.