ಪ್ರಯಾಗರಾಜ್: ಡೆಂಗ್ಯೂ ರೋಗಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ನೀಡಿದ ಆರೋಪದ ಮೇಲೆ ಜಪ್ತಿ ಮಾಡಲಾಗಿದ್ದ ಖಾಸಗಿ ಆಸ್ಪತ್ರೆಯನ್ನು ಕೆಡವಲು ಇಲ್ಲಿನ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಅಕ್ಟೋಬರ್ 20 ರಂದು ಘಟನೆ ಬೆಳಕಿಗೆ ಬಂದಿದ್ದು, ಇದಕ್ಕೂ ಒಂದು ದಿನ ಮುಂಚಿತವಾಗಿ ಆಸ್ಪತ್ರೆಯ ಕಟ್ಟಡವು ಅನಧಿಕೃತ ಎಂದು ತಿಳಿಸುವ ನೋಟಿಸ್ ಅನ್ನು ಧೂಮಂಗಂಜ್‌ನ ಝಲ್ವಾದಲ್ಲಿರುವ ಗ್ಲೋಬಲ್ ಆಸ್ಪತ್ರೆ ಮಾಲೀಕರಾದ ಮಾಲ್ತಿ ದೇವಿ ಅವರಿಗೆ ನೀಡಲಾಗಿದೆ.
ಅಕ್ಟೋಬರ್ 28ರ ಬೆಳಗ್ಗೆಯೊಳಗೆ ಕಟ್ಟಡವನ್ನು ಖಾಲಿ ಮಾಡುವಂತೆ ಪ್ರಯಾಗ್‌ರಾಜ್ ಅಭಿವೃದ್ಧಿ ಪ್ರಾಧಿಕಾರ (ಪಿಡಿಎ) ನೋಟಿಸ್‌ನಲ್ಲಿ ಮಾಲೀಕರಿಗೆ ತಿಳಿಸಿದೆ.
ಅಕ್ಟೋಬರ್ 19 ರಂದು ನೀಡಿರುವ ನೋಟೀಸ್‌ನಲ್ಲಿ ಆಸ್ಪತ್ರೆ ಮಾಲೀಕರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಈ ಹಿಂದೆಯೇ ಶೋಕಾಸ್ ನೋಟಿಸ್ ನೀಡಲಾಗಿದೆ. ಆದರೆ, ಯಾರೂ ವಿಚಾರಣೆಗೆ ಬಾರದ ಕಾರಣ ನೆಲಸಮ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ರೋಗಿಗೆ ನೀಡಲಾಗಿದೆ ಎಂದು ಹೇಳುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರ ನಿರ್ದೇಶನದ ಮೇರೆಗೆ ಅಕ್ಟೋಬರ್ 20 ರಂದು ಆಸ್ಪತ್ರೆಯನ್ನು ಸೀಜ್ ಮಾಡಲಾಗಿದೆ.
ಅಧಿಕಾರಿಗಳ ಪ್ರಕಾರ, ರೋಗಿಯಾಗಿದ್ದ ಪ್ರದೀಪ್ ಪಾಂಡೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿ ಅವರ ಸ್ಥಿತಿ ಹದಗೆಟ್ಟ ನಂತರ ಅವರು ಮೃತಪಟ್ಟರು. ಜ್ಯೂಸ್ ಅಥವಾ ನಕಲಿ ಪ್ಲೇಟ್ಲೆಟ್‌ಗಳನ್ನು ನೀಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಾದರಿಗಳನ್ನು ಪರೀಕ್ಷಿಸಿದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ.
ಇದಕ್ಕೂ ಮೊದಲು, ಖಾಸಗಿ ಆಸ್ಪತ್ರೆಯ ಮಾಲೀಕರು ಪ್ಲೇಟ್‌ಲೆಟ್‌ಗಳನ್ನು ಬೇರೆ ವೈದ್ಯಕೀಯ ಸೌಲಭ್ಯದಿಂದ ತರಲಾಗಿದೆ ಮತ್ತು ಮೂರು ಘಟಕಗಳನ್ನು ನೀಡಿದ ಬಳಿಕ ರೋಗಿ ಪ್ರತಿಕ್ರಿಯಿಸುತ್ತಿದ್ದರು ಎಂದು ತಿಳಿಸಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, 'ಆಸ್ಪತ್ರೆಯಲ್ಲಿ ಡೆಂಗ್ಯೂ ರೋಗಿಗೆ ಪ್ಲೇಟ್‌ಲೆಟ್ ಬದಲಿಗೆ ಮೂಸಂಬಿ ರಸವನ್ನು ತುಂಬಿಸಿದ ವಿಡಿಯೋ ವೈರಲ್ ಆಗಿದ್ದು, ನನ್ನ ನಿರ್ದೇಶನದ ಮೇರೆಗೆ ಆಸ್ಪತ್ರೆಗೆ ಸೀಲ್ ಮಾಡಿ ಪ್ಲೇಟ್‌ಲೆಟ್ ಪ್ಯಾಕೆಟ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದಿದ್ದಾರೆ.