ಮಂಜೇಶ್ವರ: ಜಿಲ್ಲೆಯ ಮೊದಲ ಕಾನೂನು ಕಾಲೇಜು ಕೊನೆಗೂ ಸಾಕಾರಗೊಂಡಿದೆ. ಕಣ್ಣೂರು ವಿಶ್ವವಿದ್ಯಾನಿಲಯವು ಮಂಜೇಶ್ವರ ಆಫ್ ಕ್ಯಾಂಪಸ್ ಈ ವರ್ಷವೇ ಎಲ್‍ಎಲ್‍ಬಿ ಕೋರ್ಸ್‍ಗಳನ್ನು ಪ್ರಾರಂಭಿಸುತ್ತದೆ. ಮೊದಲ ಹಂತದಲ್ಲಿ 60 ಸೀಟುಗಳಿಗೆ ಪ್ರವೇಶ ನೀಡಲಾಗುವುದು. ಮೊದಲಹಂತದಲ್ಲಿ ಎಲ್.ಎಲ್.ಎಂ ಕೋರ್ಸ್ ಮತ್ತು ಎಲ್.ಎಲ್.ಬಿ ಕೋರ್ಸ್ ಅನ್ನು ಅನುಮತಿಸಲಾಗಿದೆ.
ಜಿಲ್ಲೆಯ ಮೊದಲ ಪೂರ್ಣಪ್ರಮಾಣದ ಕಾನೂನು ಕಾಲೇಜು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜು ಬಳಿಯ ಕಣ್ಣೂರು ವಿಶ್ವವಿದ್ಯಾನಿಲಯದ ಒಡೆತನದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಿದೆ. ಕಣ್ಣೂರು, ಕಾಸರಗೋಡು ಮತ್ತು ವಯನಾಡು ಜಿಲ್ಲೆಗಳಲ್ಲಿ ಅನುಮತಿಸಲಾದ ಮೂರು ವರ್ಷಗಳ ಎಲ್‍ಎಲ್‍ಬಿ ಕೋರ್ಸ್‍ಗಳ ಪೈಕಿ ಪ್ರಸ್ತುತ ಮಂಜೇಶ್ವರದಲ್ಲಿ ಮಾತ್ರ ಈ ವರ್ಷ ತರಗತಿಗಳು ಆರಂಭಗೊಳ್ಳುತ್ತಿದೆ. ಇದರೊಂದಿಗೆ ಜಿಲ್ಲೆಯ ಸಂಪೂರ್ಣ ಕಾನೂನು ಕಲಿಕಾ ಕೇಂದ್ರದ ಬಹುದಿನಗಳ ಬೇಡಿಕೆ ಸಾಕಾರಗೊಂಡಿದೆ.
ಜಿಲ್ಲೆಯ ಕಾನೂನು ವಿದ್ಯಾರ್ಥಿಗಳು ನೆರೆಯ ಕರ್ನಾಟಕ ರಾಜ್ಯದ ಮಂಗಳೂರು ಮತ್ತು ಸುಳ್ಯ ಕಾಲೇಜುಗಳನ್ನು ಅವಲಂಬಿಸಿದ್ದಾರೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿಶ್ವವಿದ್ಯಾನಿಲಯ ನಿರ್ಮಿಸಿರುವ ಕಟ್ಟಡವನ್ನು ಸದುಪಯೋಗಪಡಿಸಿಕೊಳ್ಳಬೇಕು ಮತ್ತು ಎಲ್‍ಎಲ್‍ಬಿ ಸೇರಿದಂತೆ ಕೋರ್ಸ್‍ಗಳ ಕಾನೂನು ಅಧ್ಯಯನ ಕೇಂದ್ರವನ್ನು ಇಲ್ಲಿ ಲಭ್ಯವಾಗುವಂತೆ ಮಾಡಬೇಕು ಎಂದು ಶಾಸಕ ಎಕೆಎಂ ಅಶ್ರಫ್ ವಿಧಾನಸಭೆಯಲ್ಲಿ ತಮ್ಮ ಮೊದಲ ಸಲ್ಲಿಕೆಯಲ್ಲಿ ಮನವಿ ಮಾಡಿದ್ದರು.
ನಂತರ ವಿಸಿ ಸೇರಿದಂತೆ ಕಣ್ಣೂರು ವಿಶ್ವವಿದ್ಯಾಲಯದ ಅಧಿಕಾರಿಗಳು ಸಭೆ ನಡೆಸಿದ್ದು, ವಿಸಿ ಮಂಜೇಶ್ವರ ಕ್ಯಾಂಪಸ್‍ಗೆ ಭೇಟಿ ನೀಡಿದ್ದರು.
ಬಳಿಕ ಕಟ್ಟಡದ ಮೂಲ ಭೌತಿಕ ಸ್ಥಿತಿ ಸುಧಾರಿಸಲು ಶಾಸಕರ ನಿಧಿಯಿಂದ ಈ ಹಿಂದೆಯೇ ಹಣಕಾಸು ಇಲಾಖೆ ವಿಶೇಷ ಅನುಮತಿ ಪಡೆದು 36 ಲಕ್ಷ ರೂ.ಅನುಮತಿಸಿತ್ತು. ಬಾರ್ ಕೌನ್ಸಿಲ್ ಎಲ್‍ಎಲ್‍ಎಂ ಕೋರ್ಸ್‍ಗೆ ಅನುಮೋದನೆ ನೀಡಿದ ನಂತರ ಎಲ್‍ಎಲ್‍ಬಿ ಕೋರ್ಸ್‍ಗೆ ಅನುಮತಿ ನೀಡುವುದರೊಂದಿಗೆ ಮಂಜೇಶ್ವರ ಕ್ಯಾಂಪಸ್ ಕಾನೂನು ಅಧ್ಯಯನದ ಪೂರ್ಣ ಪ್ರಮಾಣದ ಕೇಂದ್ರವಾಗುತ್ತಿದೆ. ಈ ನಿಟ್ಟಿನಲ್ಲಿ ಎಲ್.ಎಲ್.ಎಂ. ಹಾಗೂ ಎಲ್.ಎಲ್.ಬಿ ತರಗತಿಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. ಇದರೊಂದಿಗೆ ಜಿಲ್ಲೆಯ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಕಾಣಲಿದೆ ಎಂದು ಶಾಸಕ ಎ.ಕೆ.ಎಂ.ಅಶ್ರಫ್ ಪ್ರತಿಕ್ರಿಯಿಸಿರುವರು.