ನವದೆಹಲಿ: : ಟ್ವಿಟರ್ (Twitter)ಅನ್ನು ಎಲಾನ್ ಮಸ್ಕ್ ಸ್ವಾಧೀನ ಪಡಿಸಿಕೊಂಡಿರುವುದು ಇಂತಹ ಕಂಪನಿಗಳಿಗಾಗಿರುವ ದೇಶದ ನಿಯಮಗಳನ್ನು ಅದು ಪಾಲಿಸುತ್ತದೆ ಎಂಬ ಭಾರತದ ನಿರೀಕ್ಷೆಯನ್ನು ಬದಲಿಸುವುದಿಲ್ಲ ಎಂದು ಶುಕ್ರವಾರ ಇಲ್ಲಿ ಹೇಳಿದ ಸಹಾಯಕ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ (Rajeev Chandrasekhar)ಅವರು,ಭಾರತದ ಹೊಸ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳು ಶೀಘ್ರವೇ ಪ್ರಕಟಗೊಳ್ಳಲಿವೆ ಎಂದು ತಿಳಿಸಿದರು.
ತನ್ನ ಪ್ಲಾಟ್ ಫಾರ್ಮ್ ನಿಂದ ಕೆಲವು ವಿಷಯಗಳನ್ನು ತೆಗೆಯುವಂತೆ ಸರಕಾರದ ಕೆಲವು ಆದೇಶಗಳನ್ನು ರದ್ದುಗೊಳಿಸುವಂತೆ ಟ್ವಿಟರ್ ಜುಲೈನಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವನ್ನು ಕೇಳಿಕೊಂಡಿತ್ತು.
ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಅಧಿಕಾರಿಗಳು ಕೆಲವು ಕಂಟೆಂಟ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟರ್ ಗೆ ಸೂಚಿಸಿದ್ದಾರೆ. ಸ್ವತಂತ್ರ ಸಿಖ್ ದೇಶವನ್ನು ಬೆಂಬಲಿಸುವ ಖಾತೆಗಳು,ರೈತರ ಪ್ರತಿಭಟನೆಗಳ ಕುರಿತು ಸುಳ್ಳು ಮಾಹಿತಿಗಳನ್ನು ಹರಡಿವೆ ಎನ್ನಲಾದ ಪೋಸ್ಟ್ ಗಳು ಮತ್ತು ಸರಕಾರದಿಂದ ಕೋವಿಡ್ ಸಾಂಕ್ರಾಮಿಕದ ನಿರ್ವಹಣೆಯನ್ನು ಟೀಕಿಸಿರುವ ಪೋಸ್ಟ್ ಗಳು ಇವುಗಳಲ್ಲಿ ಸೇರಿವೆ.
'ಮಾಲಿಕರು ಯಾರೇ ಆಗಿದ್ದರೂ ಸಾಮಾಜಿಕ ಮಾಧ್ಯಮಗಳಿಗೆ ನಮ್ಮ ನಿಯಮಗಳು ಮತ್ತು ಕಾನೂನುಗಳು ಒಂದೇ ಆಗಿವೆ. ಹೀಗಾಗಿ ಭಾರತೀಯ ಕಾನೂನುಗಳು ಮತ್ತು ನಿಯಮಗಳ ಅನುಸರಣೆ ನಮ್ಮ ನಿರೀಕ್ಷೆಯಾಗಿದೆ 'ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಚಂದ್ರಶೇಖರ ಹೇಳಿದರು.
ಬಾಲಿವುಡ್ ನಟಿ ಕಂಗನಾ ರಣಾವತ್ ಅವರಂತಹ ವ್ಯಕ್ತಿಗಳಿಗೆ ಟ್ವಿಟರ್ ನಿಷೇಧದ ಕುರಿತು ಸರಕಾರದ ಯೋಚನೆಯೇನು ಎಂಬ ಪ್ರಶ್ನೆಗೆ ಚಂದ್ರಶೇಖರ್ ನೇರವಾಗಿ ಉತ್ತರಿಸಲಿಲ್ಲ. ಆದರೆ,ಹಲವಾರು ತಿಂಗಳುಗಳ ಸಮಾಲೋಚನೆಗಳ ಬಳಿಕ ಭಾರತದ ನೂತನ, ತಿದ್ದುಪಡಿಗೊಳಿಸಲಾದ ಐಟಿ ನಿಯಮಗಳು ಒಂದೆರಡು ದಿನಗಳಲ್ಲಿ ಪ್ರಕಟಗೊಳ್ಳಲಿವೆ ಎಂದು ತಿಳಿಸಿದರು.
ದ್ವೇಷಪೂರಿತ ಮತ್ತು ನಿಂದನೀಯ ನಡವಳಿಕೆ ಕುರಿತು ಟ್ವಿಟರ್ ನಿಯಮಗಳ ಉಲ್ಲಂಘನೆಗಾಗಿ ಕಳೆದ ವರ್ಷ ಪ್ಲಾಟ್ ಫಾರ್ಮ್ ನಿಂದ ನಿಷೇಧಿಸಲ್ಪಟ್ಟಿರುವ ರಣಾವತ್ ಶುಕ್ರವಾರ ಇನ್ಸ್ಟಾಗ್ರಾಮ್ನಲ್ಲಿ ಮಸ್ಕ್ ಟ್ವಿಟರ್ ನ್ನು ಸ್ವಾಧೀನ ಪಡಿಸಿಕೊಂಡಿದ್ದನ್ನು ಪ್ರಶಂಸಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಬೆಂಬಲಿಗರಾಗಿರುವ ರಣಾವತ್ ತನ್ನ ಟ್ವಿಟರ್ ಖಾತೆಯನ್ನು ಮರುಸ್ಥಾಪಿಸುವಂತೆ ಮಸ್ಕ್ ಅವರನ್ನು ಕೋರಿಕೊಂಡಿರುವ ಬಳಕೆದಾರರ ಪೋಸ್ಟ್ ಗಳನ್ನೂ ಶೇರ್ ಮಾಡಿಕೊಂಡಿದ್ದಾರೆ.