ನವದೆಹಲಿ: ಐಐಟಿಯಂತಹ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಮತ್ತು ತಾಂತ್ರಿಕೇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸಬೇಕು. ಹಿಂದಿ ಭಾಷಿಕ ಪ್ರದೇಶದಲ್ಲಿ ಹಿಂದಿಯನ್ನೂ, ಇತರ ಪ್ರದೇಶಗಳಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನೂ ಬಳಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಬಗೆಗಿನ ಸಂಸದೀಯ ಸಮಿತಿಯು ಶಿಫಾರಸು ಮಾಡಿದೆ.
ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಬೇಕು ಎಂದು ವರದಿಯಲ್ಲಿ ಒತ್ತಾಯ ಮಾಡಲಾಗಿದೆ.
ಸಂಸದೀಯ ಸಮಿತಿಯ 11ನೇ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಲಾಗಿದೆ. ಎಲ್ಲ ರಾಜ್ಯಗಳಲ್ಲಿಯೂ ಇಂಗ್ಲಿಷ್‌ಗಿಂತ ಸ್ಥಳೀಯ ಭಾಷೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದೂ ವರದಿಯಲ್ಲಿ ಹೇಳಲಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಬಳಕೆಯನ್ನು ಐಚ್ಛಿಕಗೊಳಿಸಬೇಕು ಎಂದು ವರದಿ ಸಲಹೆ ನೀಡಿದೆ.
ಹೊಸ
ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸಮಿತಿಯು ಶಿಫಾರಸುಗಳನ್ನು ಮಾಡಿದೆ. ಅದರ
ಅನ್ವಯವೇ ಅಧಿಕೃತ ಭಾಷೆ ಅಥವಾ ಪ್ರಾದೇಶಿಕ ಭಾಷೆಗಳು ಬೋಧನಾ ಮಾಧ್ಯಮವಾ
ಗಬೇಕು ಎಂದು ಸಲಹೆ ಕೊಟ್ಟಿದೆ ಎಂದು ಸಮಿತಿಯ ಉಪ ಮುಖ್ಯಸ್ಥ ಭರ್ತೃಹರಿ ಮಹತಾಬ್ ಹೇಳಿದ್ದಾರೆ.
'ಎ' ವರ್ಗದ ರಾಜ್ಯಗಳಲ್ಲಿ (ಹಿಂದಿ ಭಾಷಿಕ ರಾಜ್ಯಗಳು) ಹಿಂದಿಗೆ ಗೌರವಾರ್ಹ ಸ್ಥಾನ ಕೊಡಬೇಕು, ಈ ರಾಜ್ಯಗಳಲ್ಲಿ ಹಿಂದಿ ಬಳಕೆ ಶೇಕಡ ನೂರರಷ್ಟು ಇರಬೇಕು. ಹಿಂದಿ ಭಾಷಿಕ ರಾಜ್ಯಗಳಲ್ಲಿರುವ ಐಐಟಿಗಳು, ಕೇಂದ್ರೀಯ ವಿಶ್ವವಿದ್ಯಾಲಯಗಳು ಮತ್ತು ಕೇಂದ್ರೀಯ ವಿದ್ಯಾಲಯಗಳಲ್ಲಿ ಹಿಂದಿಯು ಬೋಧನಾ ಮಾಧ್ಯಮವಾಗಬೇಕು. ಇತರ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಯು ಬೋಧನಾ ಮಾಧ್ಯಮವಾಗಬೇಕು. ಬನಾರಸ್ ಹಿಂದೂ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಅಲೀಗಢ ಮುಸ್ಲಿಂ ವಿಶ್ವವಿದ್ಯಾಲಯ ಮುಂತಾದ ಸಂಸ್ಥೆಗಳಲ್ಲಿ ಈಗ ಶೇ 20ರಿಂದ ಶೇ 30ರಷ್ಟು ಮಾತ್ರ ಹಿಂದೆ ಬಳಕೆ ಆಗುತ್ತಿದೆ. ಇನ್ನು ಮುಂದೆ ಅದು ಶೇ 100ಕ್ಕೆ ಏರಬೇಕು ಎಂದು ಮಹತಾಬ್ ಹೇಳಿದ್ದಾರೆ.
ಇಂಗ್ಲಿಷ್ ವಿದೇಶಿ ಭಾಷೆ. ಹಾಗಾಗಿ ಆ ವಸಾಹತುಶಾಹಿ ಮನಃಸ್ಥಿತಿಯನ್ನು ಕೈಬಿಡಬೇಕು ಎಂದು ಅವರು ಹೇಳಿದ್ದಾರೆ.
ಇಂಗ್ಲಿಷ್ 'ಅನ್ಯ ಭಾಷೆ' ಮತ್ತು 'ಅದನ್ನು ನಿರ್ಮೂಲನ ಮಾಡಲು ನಾವು ಬಯಸಿದ್ದೇವೆ'. ಅದರ ಸ್ಥಾನದಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳನ್ನು ಸ್ಥಾಪಿಸಬೇಕು ಎಂದು ಎರಡನೇ ಉಪ ಸಮಿತಿಯು ಸಂಚಾಲಕಿಯಾಗಿದ್ದ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಹೇಳಿದ್ದಾರೆ.
ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೆಲಸ ಮಾಡಲು ಉದ್ದೇಶಪೂರ್ವಕವಾಗಿ ಹಿಂದೇಟು ಹಾಕುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು. ಎಚ್ಚರಿಕೆಯ ಬಳಿಕವೂ ಅವರು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೆಲಸ ಮಾಡದಿದ್ದರೆ ಅದನ್ನು ವಾರ್ಷಿಕ ಕಾರ್ಯಕ್ಷಮತೆ ಮೌಲ್ಯಮಾಪನ ವರದಿಯಲ್ಲಿ ದಾಖಲಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ.
ಅಧಿಕೃತ ಭಾಷೆ ಕಾಯ್ದೆ 1963ರ ಅಡಿಯಲ್ಲಿ 1976ರಲ್ಲಿ ಈ ಸಮಿತಿಯನ್ನು ಆರಂಭಿಸಲಾಗಿದೆ. ಇದರಲ್ಲಿ 30 ಸದಸ್ಯರಿರುತ್ತಾರೆ (ಲೋಕಸಭೆ-20 ಮತ್ತು ರಾಜ್ಯಸಭೆ-10). ಅಧಿಕೃತ ಉದ್ದೇಶಗಳಿಗಾಗಿ ಹಿಂದಿಯ ಬಳಕೆಯ ಪ್ರಗತಿ ಹೇಗಿದೆ ಎಂಬುದನ್ನು ವಿಶ್ಲೇಷಿಸಿ ಸಮಿತಿಯು ರಾಷ್ಟ್ರಪತಿಯವರಿಗೆ ವರದಿ ಸಲ್ಲಿಸುತ್ತದೆ.
ಮೂರು ವರ್ಗೀಕರಣ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಹಿಂದಿ ಭಾಷಾ ಬಳಕೆಯ ಆಧಾರದಲ್ಲಿ ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ. ಈ ವರ್ಗಗಳನ್ನು 'ಎ', 'ಬಿ' ಮತ್ತು 'ಸಿ' ಎಂದು ಗುರುತಿಸಲಾಗಿದೆ.
'ಎ' ವರ್ಗದ ರಾಜ್ಯಗಳು: ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಛತ್ತೀಸಗಢ, ಉತ್ತರಾಖಂಡ, ಜಾರ್ಖಂಡ್, ಹರಿಯಾಣ, ಹಿಮಾಚಲ ಪ್ರದೇಶ, ರಾಜಸ್ಥಾನ, ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
'ಬಿ' ವರ್ಗದ ರಾಜ್ಯಗಳು: ಗುಜರಾತ್, ಮಹಾರಾಷ್ಟ್ರ, ಪಂಜಾಬ್ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಚಂಡೀಗಢ, ಡಾಮನ್ ಮತ್ತು ಡಿಯು, ದಾದ್ರಾ ಮತ್ತು ನಗರ ಹವೇಲಿ
'ಸಿ' ವರ್ಗದ ರಾಜ್ಯಗಳು: ದೇಶದ ಇತರ ಎಲ್ಲ ರಾಜ್ಯಗಳು ಈ ವರ್ಗದಲ್ಲಿ ಬರುತ್ತವೆ
ಇತರ ಶಿಫಾರಸುಗಳು
* ನೇಮಕಾತಿ ಪರೀಕ್ಷೆಗಳಲ್ಲಿ ಇಂಗ್ಲಿಷ್ ಭಾಷಾ ಪತ್ರಿಕೆ ಕಡ್ಡಾಯಗೊಳಿಸಿದ್ದನ್ನು ಕೊನೆಗೊಳಿಸಬೇಕು
* ಹಿಂದಿ ಭಾಷಿಕ ರಾಜ್ಯಗಳ ಹೈಕೋರ್ಟ್ ಆದೇಶಗಳನ್ನು ಹಿಂದಿಗೆ ಅನುವಾದಿಸಲು ವ್ಯವಸ್ಥೆ ಮಾಡಬೇಕು
* ಕೇಂದ್ರ ಸರ್ಕಾರದ ಕಚೇರಿಗಳು, ಸಚಿವಾಲಯಗಳು ಅಥವಾ ಇಲಾಖೆಗಳ ಪತ್ರಗಳು, ಫ್ಯಾಕ್ಸ್‌ಗಳು,
ಇ-ಮೇಲ್‌ಗಳು ಹಿಂದಿ ಅಥವಾ ಸ್ಥಳೀಯ ಭಾಷೆಗಳಲ್ಲಿ ಇರಬೇಕು
*ಅಧಿಕೃತ ಪತ್ರಗಳು, ಆಹ್ವಾನ ಪತ್ರಿಕೆಗಳು, ಭಾಷಣಗಳು ಹಿಂದಿ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಇರಬೇಕು
*ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ನಿರ್ವಹಣೆಯು ಹಿಂದಿ ಅಥವಾ ಸ್ಥಳೀಯ ಭಾಷೆಯಲ್ಲಿ ಇರಬೇಕು.