ನವದೆಹಲಿ: 'ಅಧಿಕ ದಟ್ಟಣೆಯ ರಾಜ್ಯ ಹೆದ್ದಾರಿಗಳನ್ನು ತನ್ನ ಸುಪರ್ದಿಗೆ ಪಡೆದು ಅವುಗಳನ್ನು ನಾಲ್ಕು ಅಥವಾ ಆರು ಪಥಗಳ ಹೆದ್ದಾರಿಗಳನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ' ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಸೋಸಿಯೇಷನ್ ಆಫ್ ನ್ಯಾಷನಲ್ ಎಕ್ಸ್‌ಚೇಂಜಸ್ ಮೆಂಬರ್ಸ್ ಆಫ್ ಇಂಡಿಯಾ (ಎಎನ್‌ಎಂಐ) ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದ ಅವರು, ' 25 ವರ್ಷಗಳ ಅವಧಿಗೆ ಈ ಹೆದ್ದಾರಿಗಳನ್ನು ಸುಪರ್ದಿಗೆ ಪಡೆಯಲಾಗುತ್ತದೆ. ಭೂ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಈ ಹೆದ್ದಾರಿಗಳ ಒಟ್ಟಾರೆ ಅಭಿವೃದ್ಧಿಗೆ ವಿನಿಯೋಗಿಸಲಾಗುವ ಮೊತ್ತವನ್ನು ಟೋಲ್ ಸಂಗ್ರಹದ ಮೂಲಕ 12 ಅಥವಾ 13 ವರ್ಷದೊಳಗೆ ಮರಳಿ ಪಡೆಯಲಾಗುತ್ತದೆ' ಎಂದು ಹೇಳಿದ್ದಾರೆ.
'ಮುಂಬೈ ಮತ್ತು ಬೆಂಗಳೂರು ನಡುವಣ ಪ್ರಯಾಣದ ಅವಧಿಯನ್ನು ಐದು ಗಂಟೆಗೆ ತಗ್ಗಿಸುವ ಆಲೋಚನೆ ಇದೆ. ಇದಕ್ಕಾಗಿ ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗಿದೆ. ದೇಶದಲ್ಲಿ ಇಂತಹ ಒಟ್ಟು 27 ಹಸಿರು ಎಕ್ಸ್‌ಪ್ರೆಸ್ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತದೆ' ಎಂದು ಮಾಹಿತಿ ನೀಡಿದ್ದಾರೆ.
'ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರವು ಹೆಚ್ಚಿನ ಒತ್ತು ನೀಡಿದೆ. ಇದಕ್ಕಾಗಿ ನಾವು ಪಿಪಿಪಿ ಮಾದರಿಯಲ್ಲಿ ಹಣ ಹೂಡಿಕೆಯನ್ನು ಆಹ್ವಾನಿಸುತ್ತಿದ್ದೇವೆ. ರಾಷ್ಟ್ರೀಯ ಜಲ ಜಾಲದ (ವಾಟರ್ ಗ್ರಿಡ್) ಮಾದರಿಯಲ್ಲೇ ರಾಷ್ಟ್ರೀಯ ಹೆದ್ದಾರಿ ಜಾಲ ಅಭಿವೃಧ್ಧಿಪಡಿಸಲಾಗುತ್ತದೆ' ಎಂದಿದ್ದಾರೆ.