ನವದೆಹಲಿ: ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಪಾವತಿ ವಿಷಯಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರ ತೃಪ್ತಿದಾಯಕವಾಗಿಲ್ಲ ಎಂದು ಸೋಮವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, 'ಸರ್ಕಾರವೇನು ದಾನ ನೀಡುತ್ತಿಲ್ಲ' ಎಂದು ಹೇಳಿದೆ.
ಈ ಕುರಿತು ವಿಸ್ತೃತ ಪ್ರಮಾಣ ಪತ್ರವನ್ನು ಶುಕ್ರವಾರದೊಳಗೆ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠ ರಾಜಸ್ಥಾನ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
'ಈ ಕುರಿತು ಹಿಂದೆಯೂ ನೀವು ಭರವಸೆ ನೀಡಿದ್ದಿರಿ' ಎಂಬುದನ್ನು ನೆನಪಿಸಿರುವ ಪೀಠ, 'ರಾಜಸ್ಥಾನ ಸರ್ಕಾರವೇನೂ ದಾನ ಮಾಡುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದೆ.
'ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ನಿರ್ದೇಶನಗಳನ್ನು ನೀಡಿದೆ' ಎಂದ ಪೀಠ, 'ಸಾಂಕ್ರಾಮಿಕದಿಂದ ಮೃತಪಟ್ಟವರ ಕುರಿತು ಸಹನಾನುಭೂತಿ ಹೊಂದಿರಬೇಕು' ಎಂದು ಸೂಚಿಸಿತು.
'ಕೋವಿಡ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ₹ 50 ಸಾವಿರ ಪರಿಹಾರ ಒದಗಿಸುವಂತೆ 2021ರಲ್ಲಿ ಹೊರಡಿಸಿದ್ದ ಆದೇಶವನ್ನು ರಾಜಸ್ಥಾನ ಸರ್ಕಾರ ಪಾಲಿಸುತ್ತಿಲ್ಲ' ಎಂದು ಆರೋಪಿಸಿ ವಕೀಲ ಗೌರವ್ ಕುಮಾರ್ ಬನ್ಸಾಲ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ಮಾಡಿತು.