ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಿಂದಾಗಿ ಕೊಯ್ಲು ಕಾರ್ಯಕ್ಕೆ ಅಡ್ಡಿಯಾಗಿದ್ದು, ಬೇಸಿಗೆ ಬೆಳೆಯ ತುಂಬಿದ ತೆನೆಗಳು ಹಾನಿಗೀಡಾದ ಹಿನ್ನೆಲೆಯಲ್ಲಿ ಅಕ್ಕಿ, ಸಿರಿ ಧಾನ್ಯಗಳು, ಸೋಯಾಬಿಲ್, ಬೇಳೆಕಾಳುಗಳು ಮುಂತಾದ ಆಹಾರ ಧಾನ್ಯಗಳು, ಹತ್ತಿ ಮತ್ತು ತೋಟಗಾರಿಕೆ ಬೆಳೆಗಳ ಬೆಲೆ ಹೆಚ್ಚುವ ಸಾಧ್ಯತೆ ಇದೆ ಎಂದು ಕೃಷಿಕರು ಮತ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಉತ್ತರ ಪ್ರದೇಶ, ರಾಜಸ್ಥಾನ, ಹರ್ಯಾಣ, ಮಧ್ಯಪ್ರದೇಶ ಮತ್ತು ಪಂಚಾಬ್‍ನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಹೊಲಗದ್ದೆಗಳಲ್ಲಿ ನೀರು ತುಂಬಿ ಬೆಳೆಗಳು ತೊಯ್ದಿವೆ. ಇದು ಕಾಳುಗಳ ನಷ್ಟಕ್ಕೆ ಕಾರಣವಾಗಲಿದೆ ಎಂದು ರೈತರು ಆತಂಕಿತರಾಗಿದ್ದಾರೆ.
ಕಳೆದ ಎರಡು ವಾರಗಳಿಂದ ಗುಜರಾತ್ ಕರಾವಳಿಯಿಂದ ಹಿಡಿದು ಉತ್ತರ ಹಾಗೂ ಕೇಂದ್ರ ಭಾರತದ ರಾಜ್ಯಗಳಲ್ಲಿ ತೇವಾಂಶ ಅತ್ಯಧಿಕವಾಗಿದ್ದು, ಉತ್ತರ ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಇದರಿಂದಾಗಿ ಜೂನ್-ಸೆಪ್ಟೆಂಬರ್ ಅವಧಿಯ ಮುಂಗಾರು ಮಳೆಯ ಹಿಂತೆಗೆತ ವಿಳಂಬವಾಗುತ್ತಿದೆ.
ಉತ್ತರ ಪ್ರದೇಶದ ಸುಮಾರು 30 ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾನಿ ಸಂಭವಿಸಿದ್ದು, ಆಲೂಗಡ್ಡೆ ಬಿತ್ತನೆ ವಿಳಂಬವಾಗಿದೆ ಹಾಗೂ ಬಾಜ್ರಾ ಸೇರಿದಂತೆ ಹಲವು ಬೆಳೆಗಳು ವ್ಯಾಪಕ ಹಾನಿಗೀಡಾಗಿವೆ ಎಂದು ರಾಜ್ಯ ಕಂದಾಯ ಇಲಾಖೆ ಹಿರಿಯ ಅಧಿಕಾರಿ ಹರ್ಷತ್ ಗೋಯೆಲ್ ಹೇಳಿದ್ದಾರೆ.
ದೇಶದಲ್ಲಿ ಈ ವರ್ಷ ಮುಂಗಾರು ಮಳೆಯಲ್ಲಿ ಭಾರಿ ವ್ಯತ್ಯಯವಾಗಿದ್ದು, ಭತ್ತ ಬೆಳೆಯುವ ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಮಳೆ ಕೊರತೆ ಉಂಟಾಗಿದ್ದು, ವಿಳಂಬವಾಗಿ ಮುಂಗಾರು ಆರಂಭವಾಗಿತ್ತು. ಇದೀಗ ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಳೆ ಮುಂದುವರಿಯವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದು ಬೆಳೆದು ನಿಂತ ಪೈರು ಹಾನಿಗೆ ಕಾರಣವಾಗಲಿದೆ ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಈ ಬಗ್ಗೆ hindustantimes.com ವರದಿ ಮಾಡಿದೆ.