ಮಾತು ಬರೋ ಮನುಷ್ಯರಿಗಿಂತ, ಮೂಕ ಪ್ರಾಣಿಗಳ ಸಂಘವೇ ಲೇಸು ಎಂಬ ಮಾತಿದೆ. ಅದು ನಿಜ ಕೂಡ... ನಾಯಿ, ಬೆಕ್ಕು, ಮೀನುಗಳು ಅಥವಾ ಇತರ ಯಾವುದೇ ಪ್ರಾಣಿಗಳನ್ನೇ ಸಾಕಿದರೂ, ಅವು ಮನುಷ್ಯನ ಅತ್ಯುತ್ತಮ ಸ್ನೇಹಿತನಾಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.. ನಾವು ಅವುಗಳಿಗೆ ಅನ್ನ, ಆಹಾರ ಕೊಟ್ಟರೆ, ಅವು ನೀಡುವುದು ಬರೀ ಪ್ರೀತಿಯನ್ನಷ್ಟೇ...ಈ ಪ್ರೀತಿ ನಮ್ಮಲ್ಲಿ ಅನೇಕ ಬದಲಾಣೆಗಳನ್ನು ಮಾಡಬಹುದಂತೆ..! ಹೌದು, ಸಾಕುಪ್ರಾಣಿಗಳು ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತವೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಹಾಗಾದರೆ ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.
ಸಾಕುಪ್ರಾಣಿಗಳನ್ನು ಸಾಕುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಆಗುವ ಲಾಭಗಳನ್ನು ಈ ಕೆಳಗೆ ನೀಡಲಾಗಿದೆ:
ಮಾನಸಿಕ ಆರೋಗ್ಯ ವೃದ್ಧಿಸುವುದು:
ಸುತ್ತಲೂ ಸಾಕುಪ್ರಾಣಿಗಳನ್ನು ಹೊಂದಿರುವುದರಿಂದ ಆತಂಕ, ಖಿನ್ನತೆ ಸೇರಿದಂತೆ ಅನೇಕ ಮಾನಸಿಕ ಆರೋಗ್ಯ ಸಮಸ್ಯೆ ನಿವಾರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. D. ಹೆಲೆನ್ ಬ್ರೂಕ್ಸ್ ನೇತೃತ್ವದ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯವು ನಡೆಸಿದ ಅಧ್ಯಯನದಲ್ಲಿ, ಸಾಕುಪ್ರಾಣಿಗಳು "ಆಂಟಲಾಜಿಕಲ್ ಸೆಕ್ಯುರಿಟಿ" ಅಂದ್ರೆ ಭಾವನಾತ್ಮಕತೆಯ ಮೂಲಕ ಒಬ್ಬರ ಜೀವನಕ್ಕೆ ಅರ್ಥವನ್ನು ನೀಡುತ್ತವೆ ಎಂದು ಕಂಡುಬಂದಿದೆ.
ಖಿನ್ನತೆ ನಿವಾರಣೆ:
ನಿಮ್ಮ ಜೀವನದಲ್ಲಿ ಪ್ರಾಣಿ ಇರುವುದು ಖಿನ್ನತೆಯ ನಿವಾರಣೆಗೆ ಸಹಕಾರಿ. ಸಂಬಂಧಿಸಿದೆ. ಸಾಕುಪ್ರಾಣಿಯನ್ನು ಹೊಂದಿರುವವರು ಕಡಿಮೆ ಖಿನ್ನತೆಯನ್ನು ಹೊಂದಿದ್ದು, ದುಃಖ, ಒತ್ತಡ ಮತ್ತು ನಷ್ಟವನ್ನು ಉತ್ತಮವಾಗಿ ನಿಭಾಯಿಸುತ್ತಾರೆ" ಎಂದು ಸಂಶೋಧನೆ ಹೇಳುತ್ತದೆ. ಅಮೆರಿಕಾದಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿ ಸಂಗಾತಿಯನ್ನು ಕಳೆದುಕೊಂಡು ಏಕಾಂಗಿಯಾಗಿರುವ ಹಿರಿಯರು ಸಾಕುಪ್ರಾಣಿಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವುದರಿಂದ ಖಿನ್ನತೆ ಸಮಸ್ಯೆಯಿಂದ ದೂರವಿದ್ದಾರೆ ಎಂದು ಹೇಳಿದೆ.
ಎಡಿಎಚ್‌ಡಿ ನಿಯಂತ್ರಣ:
ಎಡಿಎಚ್‌ಡಿ ಎಂಬುದು ಮಕ್ಕಳಲ್ಲಿ ನರಕ್ಕೆ ಸಂಬಂಧಿಸಿದ ಸಾಮಾನ್ಯ ಸಮಸ್ಯೆಯಾಗಿದ್ದು, ತಮ್ಮ ಬಗ್ಗೆ ಕಡಿಮೆ ಆತ್ಮವಿಶ್ವಾಸ ಜೊತೆಗೆ ಇತರರ ಜೊತೆಗೆ ಉತ್ತಮ ಭಾಂದವ್ಯ ಇಟ್ಟುಕೊಳ್ಳಲು ವಿಫಲರಾಗುವ ಸ್ಥಿತಿ. ಇಂತಹ ಮಕ್ಕಳು ಮನೆಯ ಸುತ್ತಲೂ ಸಾಕುಪ್ರಾಣಿಗಳನ್ನು ಹೊಂದುವುದರಿಂದ ಅನೇಕ ರೀತಿಯಲ್ಲಿ ಪ್ರಯೋಜನ ಪಡೆಯಬಹುದು. ಪ್ರಾಥಮಿಕವಾಗಿ, ಸಾಕುಪ್ರಾಣಿಗಳು ಎಡಿಎಚ್‌ಡಿ ಹೊಂದಿರುವವರಿಗೆ ದಿನಚರಿಯನ್ನು ಕಲಿಯಲು ಮತ್ತು ಜವಾಬ್ದಾರಿಯನ್ನು ಪಡೆಯಲು ಒಂದು ಮಾರ್ಗವನ್ನು ಒದಗಿಸುತ್ತವೆ. ಜೊತೆಗೆ ಸಾಕುಪ್ರಾಣಿಗಳ ಜೊತೆಗೆ ಆಡುವ ಅಗತ್ಯವಿದೆ, ಇದು ಎಡಿಎಚ್‌ಡಿ ಹೊಂದಿರುವ ಮಕ್ಕಳಿಗೆ ಉತ್ತಮ ಶಕ್ತಿಯನ್ನು ಒದಗಿಸುತ್ತದೆ, ದೀರ್ಘಾವಧಿಯಲ್ಲಿ ಅವರ ಏಕಾಗ್ರತೆಯನ್ನು ಸುಧಾರಿಸುತ್ತದೆ. ಸಾಕುಪ್ರಾಣಿಗಳು ಎಡಿಎಚ್‌ಡಿ ಹೊಂದಿರುವವರನ್ನು ಶಾಂತಗೊಳಿಸುತ್ತದೆ, ಮಕ್ಕಳ ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ ಮತ್ತು ಉತ್ತಮ ಒಡನಾಡಿಯನ್ನು ನೀಡುತ್ತದೆ.
ದೈಹಿಕ ಆರೋಗ್ಯ ವೃದ್ಧಿ:
ಮಾನಸಿಕ ಆರೋಗ್ಯದ ಜೊತೆಗೆ, ಸಾಕುಪ್ರಾಣಿಗಳನ್ನು ಸಾಕುವುದು ನಿಮ್ಮ ದೈಹಿಕ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ನಾಯಿಗಳನ್ನು ಮನೆಯಿಂದ ಹೊರಕರೆದುಕೊಂಡು ಹೋಗಬೇಕಾಗುತ್ತದೆ, ತಾಜಾ ಗಾಳಿಯಲ್ಲಿ ಮತ್ತು ಹಸಿರು ಸ್ಥಳಗಳ ಕಡೆಗೆ ಹೋಗಬೇಕಾಗುತ್ತದೆ. ಅಂದರೆ ನೀವು ಕೂಡ ಇದನ್ನು ಮಾಡಬೇಕಾಗುತ್ತದೆ. ಮನೆಯೊಳಗೆ ನಾಯಿ ಅಥವಾ ಬೆಕ್ಕಿನೊಂದಿಗೆ ಆಟವಾಡುವುದು ಸಹ ಒಂದು ರೀತಿಯ ದೈಹಿಕ ವ್ಯಾಯಾಮವನ್ನು ಒದಗಿಸುತ್ತದೆ, ಕೀಲುಗಳನ್ನು ಸಡಿಲಗೊಳಿಸುತ್ತದೆ ಮತ್ತು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ.
ಸಾಮಾಜಿಕತೆ ಮತ್ತು ಒಂಟಿತನ ನಿವಾರಣೆ:
ಸಾಕುಪ್ರಾಣಿಗಳನ್ನು ನೋಡಿಕೊಳ್ಳುವ ಇನ್ನೊಂದು ಪ್ರಯೋಜನವೆಂದರೆ ನಿಮ್ಮ ಒಂಟಿತನ ನಿವಾರಿಸುವ ಉತ್ತಮ ಸ್ನೇಹಿತ.. ನಮ್ಮ ಜೊತೆ ಯಾರೂ ಇಲ್ಲದೇ ಇದ್ದಾಗ, ಈ ಸಾಕು ಪ್ರಾಣಿಗಳು ಜೊತೆಗೆ ಇದ್ದು, ನಿಮ್ಮ ಏಕಾಂಗಿತನವನ್ನು ದೂರ ಮಾಡುತ್ತದೆ. ಜೊತೆಗೆ ನಿಮ್ಮನ್ನು ಸಾಮಾಜಿಕವಾಗಿ ತೊಡಗಿಳ್ಳುವಂತೆ ಮಾಡುವುದು. 800 ಕ್ಕೂ ಹೆಚ್ಚು ಜನರ ಅಧ್ಯಯನದಲ್ಲಿ , ನಾಯಿ ಇರದವರಿಗೆ ಹೋಲಿಸಿದರೆ ಆಗಾಗ್ಗೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗುವವರು, ಸಮಾಜ, ಸಮುದಾಯದ ಬಗ್ಗೆ ಉನ್ನತ ಪ್ರಜ್ಞೆಯನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಕಂಡುಬಂದಿದೆ.
ಜವಾಬ್ದಾರಿ, ಉದ್ದೇಶ ಮತ್ತು ಪರಾನುಭೂತಿ:
ಸಾಕುಪ್ರಾಣಿಗಳು ಇದ್ದಾಗ ಅವುಗಳನ್ನು ನೋಡಿಕೊಳ್ಳುವುದು, ಕಾಳಜಿ ವಹಿಸುವುದು ಮತ್ತು ಪ್ರೀತಿಸುವುದು ನಿಮ್ಮ ಜವಾಬ್ದಾರಿಯಾಗುತ್ತದೆ. ಈ ಮೂಲಕ ನಿಮ್ಮ ದಿನನಿತ್ಯ ಜೀವನದ ಅನೇಕ ಜವಾಬ್ದಾರಿಗಳನ್ನು ಕಲಿಯಬಹುದು. ಮುಖ್ಯವಾಗಿ ಮನೆಯಿಂದ ಹೊರ ಬರಲು ಮನಸ್ಸಿಲ್ಲದವರಿಗೆ ಸಾಕು ಪ್ರಾಣಿಗಳು ಮನೆಯಿಂದ ಹೊರಬರಲು, ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಕಾರಣವಾಗಿ ನಿಲ್ಲುತ್ತದೆ.