ಬೆಂಗಳೂರು: ಪ್ರೈವೆಸಿಗೆ ಸಂಬಂಧಿಸಿದಂತೆ ವಾಟ್ಸ್‌ಆಯಪ್-ಫೇಸ್ಬುಕ್ ವಿರುದ್ಧ ಈಗಾಗಲೇ ಕೆಲವು ಸಲ ಆರೋಪ ಕೇಳಿ ಬಂದಿದ್ದು, ಒಂದೆರಡು ಸಲ ಬಳಕೆದಾರರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಸನ್ನಿವೇಶವೂ ಸೃಷ್ಟಿಯಾಗಿತ್ತು. ಇದೀಗ ವಾಟ್ಸ್‌ಆಯಪ್ ವಿರುದ್ಧ ಗಂಭೀರವಾದ ಆರೋಪವೊಂದು ಕೇಳಿಬಂದಿದ್ದು, ಅದನ್ನು ಬಳಸುವುದೇ ಅಪಾಯಕಾರಿ ಎನ್ನಲಾಗಿದೆ.
ವಾಟ್ಸ್‌ಆಯಪ್ ಅಪ್ಲಿಕೇಷನ್ ಮೊಬೈಲ್ಫೋನ್ನಲ್ಲಿ ಇರಿಸಿಕೊಳ್ಳುವುದು ಹ್ಯಾಕರ್ಗಳಿಗೆ ದಾರಿ ಮಾಡಿಕೊಟ್ಟಂತೆ ಎಂದೂ ಹೇಳಲಾಗಿದೆ. ಇತ್ತೀಚೆಗೆ ವಾಟ್ಸ್‌ಆಯಪ್ ಸಂಸ್ಥೆ ಭದ್ರತೆ ವಿಷಯಕ್ಕೆ ಸಂಬಂಧಿಸಿದಂತೆ ನೀಡಿರುವ ಮಾಹಿತಿಯನ್ನು ಆಧರಿಸಿಯೇ ಇಂಥದ್ದೊಂದು ಆರೋಪವನ್ನು ಮಾಡಲಾಗಿದೆ.
ಹ್ಯಾಕರ್ಗಳು ಹಾನಿಕಾರಕ ವಿಡಿಯೋವನ್ನು ವಾಟ್ಸ್‌ಆಯಪ್ ಬಳಕೆದಾರರಿಗೆ ಕಳುಹಿಸುವ ಮೂಲಕ ಇಲ್ಲವೇ ವಾಟ್ಸ್‌ಆಯಪ್ ವಿಡಿಯೋ ಕಾಲ್ ಮೂಲಕ ಅಂಥ ಮೊಬೈಲ್ಫೋನ್ಗಳಿಗೆ ಪ್ರವೇಶ ಪಡೆದು ಅದನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಬಹುದಾಗಿದೆ ಎಂಬ ಬಹುದೊಡ್ಡ ಆರೋಪ ಕೇಳಿಬಂದಿದೆ. ಇಂಥದ್ದೊಂದು ಆರೋಪವನ್ನು ವಾಟ್ಸ್ಆಯಪ್ಗೆ ಬಹುದೊಡ್ಡ ಸ್ಪರ್ಧಿ ಆಗಿರುವ ಹಾಗೂ ಅಡ್ವಾನ್ಸ್ಡ್ ಫೀಚರ್ಸ್ಗಳಲ್ಲಿ ವಾಟ್ಸ್ಆಯಪ್ಗಿಂತ ಸಾಕಷ್ಟು ಮುಂದಿರುವ ಟೆಲಿಗ್ರಾಂ ಸಂಸ್ಥಾಪಕ ಮತ್ತು ಸಿಇಒ ಪಾವೆಲ್ ಡುರೊವ್ ಮಾಡಿದ್ದಾರೆ.
ವಾಟ್ಸ್ಆಯಪ್ನ ಎಷ್ಟೇ ಅಡ್ವಾನ್ಸ್ಡ್ ವರ್ಷನ್ ಬಳಸಿದರೂ, ಲೇಟೆಸ್ಟ್ ಅಪ್ಡೇಟ್ ಮಾಡಿಕೊಂಡಿದ್ದರೂ ಸುರಕ್ಷತೆ ವಿಷಯದಲ್ಲಿ ಅದು ಅಪಾಯಕಾರಿ. ಏಕೆಂದರೆ 2018, 2019, 2020ರಲ್ಲೂ ಇದೇ ಭದ್ರತಾ ದೋಷಗಳು ವಾಟ್ಸ್ಆಯಪ್ನಲ್ಲಿ ಕಂಡುಬಂದಿದ್ದವು. 2017ರಲ್ಲೂ ಈ ಲೋಪ ಬೆಳಕಿಗೆ ಬಂದಿದ್ದು, 2016ರ ಮೊದಲು ವಾಟ್ಸ್ಆಯಪ್ನಲ್ಲಿ ಎನ್ಕ್ರಿಪ್ಷನ್ ಇರಲಿಲ್ಲ ಎಂದು ಪಾವೆಲ್ ಹೇಳಿದ್ದಾರೆ.
ಪ್ರತಿ ವರ್ಷ ವಾಟ್ಸ್ಆಯಪ್ನಲ್ಲಿ ಏನಾದರೊಂದು ಅಪಾಯ ಬೆಳಕಿಗೆ ಬರುತ್ತಿದ್ದು, ಅದರಿಂದ ಬಳಕೆದಾರರ ಉಪಕರಣಗಳಿಗೆ ಅಪಾಯ ಇರುವುದು ಬಹಿರಂಗವಾಗುತ್ತಿದೆ. ಅವರು ಎಷ್ಟೇ ಬಗೆಹರಿಸಿದರೂ ಸುರಕ್ಷತೆಯ ಲೋಪ ಅದರಲ್ಲಿ ಮುಂದುವರಿದಿದೆ. ಹೀಗಾಗಿ ನಾನು ಕೆಲವು ವರ್ಷಗಳ ಹಿಂದೆಯೇ ವಾಟ್ಸ್‌ಆಯಪ್ ಡಿಲೀಟ್ ಮಾಡಿದ್ದೇನೆ. ಏಕೆಂದರೆ ಅದನ್ನು ಅಳವಡಿಸಿಕೊಳ್ಳುವುದು ನಮ್ಮ ಪೋನ್ಗೆ ಬಾಗಿಲು ಅಳವಡಿಸಿದಂತೆ ಎಂಬುದಾಗಿ ಅವರು ಆರೋಪಿಸಿದ್ದಾರೆ.
ಪಾವೆಲ್ ಡುರೊವ್ ಹೇಳಿಕೆ: https://t.me/PavelDurovs/153
ಕಳೆದ 13 ವರ್ಷಗಳಿಂದ ವಾಟ್ಸ್‌ಆಯಪ್ ನಿಗಾ ಇಡುವ ಉಪಕರಣವಾಗಿ ಬಳಕೆಯಾಗುತ್ತಿದೆ ಎಂದಿರುವ ಪಾವೆಲ್, ಜನರು ಟೆಲಿಗ್ರಾಂ ಬಳಸಲಿ ಎಂಬ ಕಾರಣಕ್ಕೆ ನಾನು ಇದನ್ನು ಹೇಳುತ್ತಿಲ್ಲ. ಟೆಲಿಗ್ರಾಮ್ಗೆ ಈಗಾಗಲೇ 70 ಕೋಟಿಗೂ ಅಧಿಕ ಬಳಕೆದಾರರಿದ್ದಾರೆ, ಪ್ರತಿ ದಿನ 20 ಲಕ್ಷಕ್ಕೂ ಅಧಿಕ ಮಂದಿ ಟೆಲಿಗ್ರಾಮ್ಗೆ ಸೈನ್ಅಪ್ ಆಗುತ್ತಿದ್ದಾರೆ. ಟೆಲಿಗ್ರಾಮ್ಗೆ ಹೆಚ್ಚುವರಿ ಪ್ರಚಾರ ಬೇಕಾಗಿಲ್ಲ. ನೀವು ನಿಮ್ಮ ಇಷ್ಟದ ಯಾವುದೇ ಮೆಸೇಜಿಂಗ್ ಆಯಪ್ ಬಳಸಬಹುದು, ಆದರೆ ವಾಟ್ಸ್ಆಯಪ್ನಿಂದ ದೂರವಿರಿ ಎಂದು ಪಾವೆಲ್ ಹೇಳಿದ್ದಾರೆ. ಈ ಕುರಿತು ಅವರು ಮಾಡಿರುವ ಟ್ವೀಟ್ ಕೂಡ ಭರ್ಜರಿ ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ.