ಮುಂಬೈ: ರಾಜಕೀಯ ಕಾರಣಗಳಿಂದ ಕೆಲವು ಪ್ರಕರಣಗಳಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಶುಕ್ರವಾರ ಟೀಕಿಸಿದ್ದಾರೆ.
ಇಲ್ಲಿನ ತಾಜ್‌ಮಹಲ್ ಪ್ಯಾಲೆಸ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನೆ ನಿಗ್ರಹ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರರ ಕುರಿತು ನೆರೆಯ ಪಾಕಿಸ್ತಾನ ಮತ್ತು ಚೀನಾ ತಳೆದಿರುವ ನಿಲುವುಗಳನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.
'ಇನ್ನೊಂದು ತಿಂಗಳಲ್ಲಿ ಮುಂಬೈ ದಾಳಿಗೆ 14 ವರ್ಷಗಳು ತುಂಬಲಿವೆ. ಆದರೆ ಈ ದಾಳಿಯ ಹಿಂದಿನ ಪ್ರಮುಖ ಸಂಚುಕೋರರು ಈಗಲೂ ಸುರಕ್ಷಿತರಾಗಿದ್ದಾರೆ ಮತ್ತು ಶಿಕ್ಷೆಗೆ ಒಳಗಾಗಿಲ್ಲ' ಎಂದೂ ಅವರು ಹೇಳಿದ್ದಾರೆ.
ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳ ಮುಖ್ಯಸ್ಥರ ವಿರುದ್ಧ ನಿರ್ಬಂಧ ಹೇರುವ ಪ್ರಯತ್ನಕ್ಕೆ ಚೀನಾವು ತಡೆಯೊಡ್ಡುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್ ಅವರ ಈ ಹೇಳಿಕೆಯು ಮಹತ್ವ ಪಡೆದುಕೊಂಡಿದೆ.
ಹಣಕಾಸಿನ ನೆರವು ತಡೆಗೆ ಕ್ರಮ ಅಗತ್ಯ:
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಹಣಕಾಸಿನ ನೆರವು ಹರಿದು ಬರುವುದನ್ನು ತಡೆಯಲು ವರ್ಚುವಲ್ ಕರೆನ್ಸಿ ವ್ಯವಹಾರಗಳ ಮೇಲೆ ನಿಗಾ ಇಡಬೇಕು, ಮಾದಕ ವಸ್ತು ಮತ್ತು ಅಕ್ರಮ ಶಸ್ತ್ರಾಸ್ತ್ರ ಸಾಗಣೆ ದಂಧೆಗಳಿಗೆ ಕಡಿವಾಣ ಹಾಕಬೇಕು ಎಂದೂ ಸಮಾವೇಶದಲ್ಲಿ ಭಾರತವು ಪ್ರತಿಪಾದಿಸಿದೆ.