ನವದೆಹಲಿ:ಅಪಾಯಕಾರಿ ವೇಗದ ಕಾರು ಚಾಲನೆಯ ಫೇಸ್‍ಬುಕ್ ಲೈವ್ ಸಾಹಸವೊಂದರ ವೇಳೆ ನಾಲ್ವರು ಸ್ನೇಹಿತರು ಬಿಎಂಡಬ್ಲ್ಯೂ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಪೂರ್ವಾಂಚಲ ಎಕ್ಸ್‌ಪ್ರೆಸ್ ಹೈವೇಯ ಸುಲ್ತಾನ್‍ಪುರದಲ್ಲಿ ನಡೆದಿದೆ.
ಬಿಹಾರದ ರೋಹ್ಟಾಸ್ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್ ಆಗಿದ್ದ ಡಾ.ಆನಂದ್ ಪ್ರಕಾಶ್ (35) ಎಂಬವರು ಇತರ ಮೂವರು ಸಹ ಪ್ರಯಾಣಿಕರ ಜತೆ ಉತ್ಸಾಹದಿಂದ 230 ಕಿಲೋಮೀಟರ್ ವೇಗದಲ್ಲಿ ಚಲಾಯಿಸುತ್ತಿದ್ದ ಬಿಎಂಡಬ್ಲ್ಯೂ ಕಾರು ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೇಸ್‍ಬುಕ್ ಲೈವ್‍ನಲ್ಲಿ ಈ ಸಾಹಸ ನಡೆಸುತ್ತಿದ್ದ ನಾಲ್ವರ ಪೈಕಿ ಒಬ್ಬ ಸ್ಪೀಡ್‍ಮೀಟರ್ ಇನ್ನೇನು ಕೆಲವೇ ಕ್ಷಣದಲ್ಲಿ 300 ಕಿಲೋಮೀಟರ್ ತಲುಪಲಿದೆ ಎಂದು ಹೇಳುತ್ತಿರುವುದು ಕೇಳಿಸುತ್ತಿತ್ತು. ಈ ಪೈಕಿ ಫೇಸ್‍ಬುಕ್ ಲೈವ್‍ನಲ್ಲೇ ಮತ್ತೊಬ್ಬ ಸಾಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದ. ಕೆಲವೇ ಕ್ಷಣಗಳಲ್ಲಿ ಆತ ಬಯಸಿದ್ದ ದುರಂತ ಸಂಭವಿಸಿತು ಎಂದು ಪೊಲೀಸರು ವಿವರಿಸಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ಢಿಕ್ಕಿ ಹೊಡೆದು ನಜ್ಜುಗುಜ್ಜಾಯಿತು. ಎಂಜಿನಿಯರ್ ದೀಪಕ್ ಕುಮಾರ್, ರಿಯಲ್ ಎಸ್ಟೇಟ್ ಉದ್ಯಮಿ ಅಖಿಲೇಶ್ ಸಿಂಗ್ ಮತ್ತು ಉದ್ಯಮಿ ಮುಖೇಶ್ ಅವರ ರಕ್ತಸಿಕ್ತ ದೇಹಗಳು ರಸ್ತೆಯಲ್ಲಿ ಚೂರು ಚೂರಾಗಿ ಬಿದ್ದ ದೃಶ್ಯ ಕಂಡುಬಂತು. ಬಿಹಾರದ ಈ ನಾಲ್ಕೂ ಮಂದಿ ದೆಹಲಿಗೆ ಬಿಎಂಡಬ್ಲ್ಯೂ ಕಾರಿನಲ್ಲಿ ಹೊರಟಿದ್ದರು.
ಈ ದುರ್ಘಟನೆ ಬಗ್ಗೆ ಎಲ್ಲ ಆಯಾಮದಿಂದ ತನಿಖೆ ನಡೆಸಲಾಗುತ್ತಿದೆ ಎಂದು ಸುಲ್ತಾನ್‍ಪುರ ಎಸ್ಪಿ ಸೋಮನ್ ಬರ್ಮಾ ಹೇಳಿದ್ದಾರೆ. ತಲೆ ಮರೆಸಿಕೊಂಡಿರುವ ಟ್ರಕ್ ಚಾಲಕನ ಪತ್ತೆಗೆ ಜಾಲ ಬೀಸಲಾಗಿದ್ದು, ಅಪಘಾತದ ತಾಂತ್ರಿಕ ತನಿಖೆ ನಡೆಸಲು ಆದೇಶಿಸಲಾಗಿದೆ. ಟ್ರಕ್ ಚಾಲಕನ ವಿರುದ್ಧ ನಿರ್ಲಕ್ಷ್ಯದ ಚಾಲನೆ ಆರೋಪ ಹೊರಿಸಲಾಗಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.