ಪಿಲಿಭಿತ್: ಮಲ ಮಗ ಮತ್ತು ಪತಿಯ ಸ್ನೇಹಿತರಿಂದ ನಿರಂತರ ಅತ್ಯಾಚಾರಕ್ಕೊಳಗಾಗಿರುವ ಮಹಿಳೆಯೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದು 'ದಯಾಮರಣ'ಕ್ಕೆ ಅನುಮತಿ ನೀಡುವಂತೆ ಕೋರಿದ್ದಾರೆ.
'ನ್ಯಾಯದ ಭರವಸೆಯನ್ನು ಕಳೆದುಕೊಂಡಿದ್ದೇನೆ' ಎಂದು 30 ವರ್ಷ ವಯಸ್ಸಿನ ಸಂತ್ರಸ್ತ ಮಹಿಳೆ ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನ್ಯಾಯಾಲಯದ ಆದೇಶದ ನಂತರ ಅಕ್ಟೋಬರ್ 9 ರಂದು ಪುರನ್‌ಪುರ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದರೂ, ಪೊಲೀಸರು ಆರೋಪಿಗಳನ್ನು ಉದ್ದೇಶಪೂರ್ವಕವಾಗಿಯೇ ಬಂಧಿಸುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಅವರಿಂದ ನನಗೆ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿದೆ. ನನ್ನ ಮೇಲಿನ ದೌರ್ಜನ್ಯದ ಬಗ್ಗೆ ಮೌನವಾಗಿರುವಂತೆ ಹೆದರಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
'ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ನ್ಯಾಯ ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಆದ್ದರಿಂದ, ನಿಮ್ಮ (ರಾಷ್ಟ್ರಪತಿ) ಅನುಮತಿಯೊಂದಿಗೆ ನನ್ನ ಜೀವನವನ್ನು ಅಂತ್ಯಗೊಳಿಸುತ್ತೇನೆ' ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.
ಮೊದಲ ಪತಿಯಿಂದ ವಿಚ್ಛೇದನ ಪಡೆದ ಬಳಿಕ ಚಂಡೀಗಢದ 55 ವರ್ಷದ ವಿಚ್ಛೇದಿತ ರೈತನೊಬ್ಬನನ್ನು ವಿವಾಹವಾಗಿರುವುದಾಗಿ ಮಹಿಳೆ ಹೇಳಿದ್ದಾರೆ.
ನನ್ನ ಮಲಮಗ ನನ್ನೊಂದಿಗೆ ಲೈಂಗಿಕ ಸಂಪರ್ಕ ಬಯಸಿದ್ದ. ಪದೇ ಪದೆ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ವಿಷಯ ಬಹಿರಂಗಪಡಿಸಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆತ ನನ್ನನ್ನು ಹೆದರಿಸಿದ್ದ. ಹೀಗಾಗಿ ಆರಂಭದಲ್ಲಿ ನಾನು ಸುಮ್ಮನಿರಲೇಬೇಕಾಯಿತು. ನಾನು ಗರ್ಭಿಣಿಯಾದೆ. ಡಿಎನ್‌ಎ ಪರೀಕ್ಷೆಗೆ ಹೋಗಲು ಬಯಸಿದಾಗ ನನ್ನ ಹೊಟ್ಟೆಗೆ ನಿಷ್ಕರುಣೆಯಿಂದ ಹೊಡೆಯಲಾಯಿತು. ನಂತರ, ಪುರನ್‌ಪುರದ ಖಾಸಗಿ ಆಸ್ಪತ್ರೆಯಲ್ಲಿ ನನಗೆ ಬಲವಂತವಾಗಿ ಗರ್ಭಪಾತ ಮಾಡಿಸಲಾಯಿತು ಎಂದು ಆಕೆ ಹೇಳಿದ್ದಾರೆ.
ಜುಲೈ 18 ರಂದು ಪತಿಯ ಸ್ನೇಹಿತನ ಫಾರ್ಮ್‌ಹೌಸ್‌ಗೆ ಕರೆದೊಯ್ಯಲಾಯಿತು. ಅಲ್ಲಿ ಆತನ ಸಂಬಂಧಿಕರೊಬ್ಬರು ಮತ್ತು ಇಬ್ಬರು ಸಹೋದ್ಯೋಗಿಗಳು ನನ್ನ ಮೇಲೆ ಅತ್ಯಾಚಾರ ಎಸಗಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತಾದರೂ ಅವರು ಕಿವಿಗೊಡಲೇ ಇಲ್ಲ ಎಂದು ಪೊಲೀಸರ ವಿರುದ್ಧ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ನ್ಯಾಯಾಲಯಕ್ಕೆ ಹೋಗಿ ಎಫ್‌ಐಆರ್ ದಾಖಲಾಗುವಂತೆ ಮಾಡಲಾಯಿತು. ಇತ್ತೀಚೆಗಷ್ಟೇ ಪುರನ್‌ಪುರ್ ಕೊತ್ವಾಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪತಿ ಮತ್ತು ಮಲಮಗ ಸೇರಿದಂತೆ ಐವರ ವಿರುದ್ಧ ಐಪಿಸಿ ಸೆಕ್ಷನ್ 376-ಡಿ (ಗ್ಯಾಂಗ್-ರೇಪ್), 323 (ಗಾಯಗೊಳಿಸುವುದು), 504 (ಉದ್ದೇಶಪೂರ್ವಕ ಅವಮಾನ) ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ, ಯಾವುದೇ ಬಂಧನವಾಗಿಲ್ಲ ಎಂದು ಆಕೆ ವಿವರಿಸಿದ್ದಾರೆ.
ಮಹಿಳೆ ಪ್ರಸ್ತುತ ತಾಯಿ, ಸಹೋದರ ಮತ್ತು ಆರು ವರ್ಷದ ಮಗನೊಂದಿಗೆ ಬರೇಲಿಯಲ್ಲಿ ವಾಸವಾಗಿದ್ದಾರೆ.