ಕಾಸರಗೋಡು: ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಿಗೂಢವಾಗಿ ನಾಪತ್ತೆಯಗಿರುವವರನ್ನು ಹುಡುಕಿ ಪತ್ತೆಹಚ್ಚುವ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಚಾಲನೆ ನೀಡಿದೆ. ರಾಜ್ಯ ಗೃಹಖಾತೆ ನಿರ್ದೇಶಾನುಸಾರ ನಿಗೂಢವಾಗಿ ನಾಪತ್ತೆಯಾದವರನ್ನು ಪತ್ತೆಹಚ್ಚುವ ತನಿಖೆಗೆ ಚುರುಕು ಮುಟ್ಟಿಸಲಾಗಿದೆ.
ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ನಿಗೂಢ ನಾಪತ್ತೆ ಪ್ರಕರಣದ 42ಕೇಸುಗಳು ದಾಖಲಾಗಿದ್ದು, ಇವುಗಳಲ್ಲಿ ಎಂಟು ಮಂದಿಯನ್ನು ಮಾತ್ರ ಪತ್ತೆಹಚ್ಚಲಾಗಿದೆ. ನಾಪತ್ತೆಯಾದವರನ್ನು ಪತ್ತೆಹಚ್ಚಿ ಕರೆತರುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವೈಭವ್ ಸಕ್ಸೇನಾ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ. ಎಸ್.ಐ ಲಕ್ಷ್ಮೀನಾರಾಯಣ, ಸಿವಿಲ್ ಪೊಲೀಸ್ ಆದಿಕಾರಿಗಳಾದ ಶ್ರೀಜಿತ್, ಕೆ. ರತೀಶ್ ಈ ತಂಡದಲ್ಲಿದ್ದಾರೆ. ಇಲ್ಲಿಂದ ನಾಪತ್ತೆಯಾಗಿದ್ದವರಲ್ಲಿ ಕೆಲವರನ್ನು ಕರ್ನಾಟಕ, ತಮಿಳ್ನಾಡಿನಿಂದಲೂ ವಿಶೇಷ ತಂಡ ಪತ್ತೆಹಚ್ಚಿದೆ.
ಚೀಮೇನಿ ಆಣೆ ಪೊಲೀಸರು 2019ರಲ್ಲಿ ದಾಖಲಿಸಿಕೊಂಡ ಪ್ರಕರಣದಲ್ಲಿ ನಾಪತ್ತೆಯಾಗಿರುವ ಹೋಟೆಲ್ ಮಾಲಿಕರೊಬ್ಬರನ್ನು ಮಹಾರಾಷ್ಟ್ರದ ಕೊಲಾಪುರದಿಂದ ಪತ್ತೆಹಚ್ಚಲಾಗಿದೆ. ಆರ್ಥಿಕ ಸಮಸ್ಯೆಯಿಂದ ಇವರು ಊರು ಬಿಟ್ಟು ತೆರಳಿದ್ದರು. ಇದೇ ರೀತಿ ಕಾಸರಗೋಡು ಜಿಲ್ಲೆಯಿಂದ ನಾಪತ್ತೆಯಾಗಿದ್ದ ನಾಲ್ಕು ಮಂದಿ ಅತಿಥಿ ಕಾರ್ಮಿಕರನ್ನು ಪತ್ತೆಹಚ್ಚಿ ಕರೆತರುವಲ್ಲಿ ಯಶಸ್ವಿಯಾಗಿದೆ.
ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಕಾಸರಗೋಡು ಹಾಗೂ ಆದೂರು ಠಾಣೆಗಳಲ್ಲಿ ತಲಾ 7, ಕುಂಬಳೆ, ಮೇಲ್ಪರಂಬ, ಬೇಕಲದಲ್ಲಿ ತಲಾ 3, ಮಂಜೇಶ್ವರ 4, ವಿದ್ಯಾನಗರ, ಚೀಮೇನಿ, ರಾಜಾಪುರದಲ್ಲಿ ತಲಾ 1, ಅಂಬಲತ್ತರ , ನೀಲೇಶ್ವರ ತಲಾ 2, ಚೀಮೇನಿ 5, ಹೊಸದುರ್ಗದಿಂದ 6ಮಂದಿ ನಾಪತ್ತೆಯಾಗಿದ್ದಾರೆ. 2016ರ ನಂತರ ನಾಪತ್ತೆಯಾಗಿರುವವರ ಪೈಕಿ ಇನ್ನೂ ಹಲವು ಮಂದಿಯ ಪತ್ತೆಕಾರ್ಯ ಬಾಕಿಯಿದೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ವರ್ಷದ ಹಿಂದೆ ನಾಪತ್ತೆಯಾಗಿರುವ ತಾಯಿ ಮತ್ತು ಆರರ ಹರೆಯದ ಮಗುವಿನ ಪತ್ತೆ ಇನ್ನೂ ಸಾಧ್ಯವಾಗಿಲ್ಲ.
ಕಾಸರಗೋಡು ಜಿಲ್ಲೆಯಲ್ಲಿ ನಿಗೂಢವಾಗಿ ನಾಪತ್ತೆಯಾಗಿರುವವರ ಪತ್ತೆಗೆ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ
0
ಅಕ್ಟೋಬರ್ 09, 2022
Tags