ಕಾಸರಗೋಡು: ಆಡಳಿತ ಭಾಷಾ ಸಪ್ತಾಹದ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ನವೆಂಬರ್ 1ರಂದು ನಡೆಯಲಿರುವ ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಮಲಯಾಳ ಲೇಖಕರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮಲಯಾಳ ಸಾಹಿತಿ 'ಪೆರುಂಬಳ ಪುಳ' ಕಾವ್ಯದ ಲೇಖಕ ರಾಧಾಕೃಷ್ಣನ್ ಪೆರುಂಬಳ ಹಾಗೂ ತುಳು-ಕನ್ನಡ ಲೇಖಕಿ ರಾಜಶ್ರೀ ಟಿ.ರೈ ಪೆರ್ಲ ಅವರನ್ನು ಗೌರವಿಸಲಾಗುವುದು.
ಮಲಯಾಳ ಕಾವ್ಯ, ಸಾಮಾಜಿಕ, ಸಾಂಸ್ಕøತಿಕ ಮತ್ತು ಕಾನೂನು ವಲಯಕ್ಕೆ ನೀಡಿದ ಕೊಡುಗೆಗಳಿಗಾಗಿ ರಾಧಾಕೃಷ್ಣನ್ ಪೆರುಂಬಳ ಅವರನ್ನು ಗೌರವಿಸಲಾಗುತ್ತಿದೆ. ತುಳು ಕಾದಂಬರಿಗಳು, ಸಣ್ಣ ಕಥೆಗಳು ಮತ್ತು ತುಳು ಸಂಸ್ಕøತಿಯ ಸಂಶೋಧನಾ ಕಾರ್ಯಗಳು ರಾಜಶ್ರೀ ಟಿ ರೈ ಪೆರ್ಲ ಅವರ ಮುಖ್ಯ ಅಧ್ಯಯನ ಕ್ಷೇತ್ರವಾಗಿದ್ದು, ನಾಲ್ಕು ತುಳು ಕಾದಂಬರಿಗಳನ್ನು ಬರೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯ ಸಂಶೋಧನಾ ಕೃತಿಯನ್ನು ಪ್ರಕಟಿಸಿದೆ. ಅವರ ಕಥೆಗಳು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎರಡನೇ ವರ್ಷದ ಸ್ನಾತಕೋತ್ತರ ವಿಭಾಗದ ಪಠ್ಯವಾಗಿ ಅಳವಡಿಸಿಕೊಳ್ಳಲಾಗಿದೆ. ಇವರ ಕಥೆ, ಲೇಖನಗಳು ಪ್ರಮುಖ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿದೆ. ಮಂಗಳೂರು ಮತ್ತು ಮೈಸೂರು ಆಕಾಶವಾಣಿಯಿಂದಲೂ ಇದು ಪ್ರಸಾರಗೊಂಡಿದೆ. ಇವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಣಿಯಾಡಿ ಕಾದಂಬರಿ ಪ್ರಶಸ್ತಿ, ರತ್ನವರ್ಮ ಹೆಗ್ಡೆ ನಾಟಕ ಪ್ರಶಸ್ತಿ ಮತ್ತು ನಿಯತಕಾಲಿಕೆಗಳ ವಾರ್ಷಿಕ ಕಥಾ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿದೆ.