ಲಖನೌ: ಬುದ್ಧ ಮತ್ತು ಸಾಮ್ರಾಟ ಅಶೋಕ ಅವರ ಅನುಯಾಯಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಮರುಪರಿಶೀಲಿಸಲು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾದೀಶ ವಿನಯ್ ಸಿಂಗ್ ಅವರು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿದ್ದಾರೆ. ಆರೆಸ್ಸೆಸ್ ನಾಯಕರ ವಿರುದ್ಧದ ಪ್ರಕರಣವನ್ನು ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ, ಅರ್ಜಿ ಮರುಪರಿಶೀಲಿಸುವಂತೆ ಕೋರಿ ಬ್ರಹ್ಮೇಂದ್ರ ಸಿಂಗ್ ಮೌರ್ಯ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಮೊದಲಿನ ಆದೇಶ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಮೌರ್ಯ ಪರಿಶೀಲಿಸುವಂತೆ ಕೋರಿ ಸಲ್ಲಿಸುವ ಅರ್ಜಿಯಲ್ಲಿ ತಿಳಿಸಿದ್ದಾರೆ. ಆದರೆ ಈ ಅರ್ಜಿಯಲ್ಲಿ ವಿಚಾರಣೆಗೆ ತೆಗೆದುಕೊಳ್ಳುವಂತಹ ಮಹತ್ವದ ಸಂಗತಿ ಇಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಲಾಗಿದೆ.
2016ರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಇತರರ ಮುಖಂಡರ ವಿರುದ್ಧ ಬುದ್ಧ ಮತ್ತು ಸಾಮ್ರಾಟ ಅಶೋಕ ಚಕ್ರವರ್ತಿಯ ಅನುಯಾಯಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮೌರ್ಯ ಆರೋಪಿಸಿದ್ದಾರೆ.