ನವದೆಹಲಿ:ವೆಬ್ ಸರಣಿಗಳು,ಚಲನಚಿತ್ರಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆನ್ಲೈನ್ ವೇದಿಕೆಗಳಲ್ಲಿ ಅವುಗಳ ಪ್ರಸಾರಕ್ಕೆ ಮುನ್ನ ಪೂರ್ವ ವೀಕ್ಷಣೆಗಾಗಿ ಸಮಿತಿಯೊಂದನ್ನು ರಚಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲ(Supreme Court) ಯವು ವಜಾಗೊಳಿಸಿದೆ.
ಪ್ರಿ-ಸೆನ್ಸಾರ್ಶಿಪ್ ಅನುಮತಿಸುವ ವಿಷಯವಲ್ಲ ಎಂದು ಈ ನ್ಯಾಯಾಲಯವು ಮೊದಲಿನಿಂದಲೂ ಹೇಳುತ್ತಿದೆ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ (U.U.Lalit) ನೇತೃತ್ವದ ಪೀಠವು,ವೆಬ್ ಸರಣಿಗಳಿಗೆ ಪೂರ್ವ ವೀಕ್ಷಣಾ ಸಮಿತಿಯಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿತು.
ಉತ್ತರ ಪ್ರದೇಶದ 'ಮಿರ್ಝಾಪುರ'('Mirzapur') ಹೆಸರಿನ ಅಮೆಝಾನ್ ಪ್ರೈಮ್ ವೆಬ್ ಸರಣಿಯು ಅದನ್ನು 'ಗೂಂಡಾಗಳು ಮತ್ತು ವ್ಯಭಿಚಾರಿಗಳ ನಗರ'('City of hooligans and adulterers') ಎಂದು ಬಿಂಬಿಸಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಸುಜಿತ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಕೈಗೆತ್ತಿಕೊಂಡಿತ್ತು.
ಪ್ರಿ-ಸ್ಕ್ರೀನಿಂಗ್ ಕಮಿಟಿ ರಚನೆಯ ಜೊತೆಗೆ ಕಾರ್ಯಕ್ರಮದ ಎರಡನೇ ಸೀಝನ್ನ ಬಿಡುಗಡೆಯನ್ನು ನಿಷೇಧಿಸುವಂತೆಯೂ ಸಿಂಗ್ ತನ್ನ ಅರ್ಜಿಯಲ್ಲಿ ಕೋರಿದ್ದರು. ಆದರೆ ಎರಡನೇ ಸೀಝನ್ ಈಗಾಗಲೇ 2020,ಅ.23ರಂದು ಬಿಡುಗಡೆಗೊಂಡಿದೆ ಎನ್ನುವುದನ್ನು ಗಮನಿಸಿದ ನ್ಯಾಯಾಲಯವು,ಸ್ಕೀನಿಂಗ್ ಕಮಿಟಿಯನ್ನು ಪರಿಗಣನೆಗೆತ್ತಿಕೊಳ್ಳಲು ನಿರ್ಧರಿಸಿತು.
ಕಾರ್ಯಕ್ರಮದ ಮೂರನೇ ಸೀಝನ್ ನಿರ್ಮಾಣ ಹಂತದಲ್ಲಿದೆ ಎಂದೂ ಅರ್ಜಿದಾರರು ಬೆಟ್ಟು ಮಾಡಿದರಾದರೂ, ಪ್ರಾರ್ಥನೆಯನ್ನು ಪರಿಗಣಿಸಲು ಅರ್ಜಿದಾರರು ಇತ್ತೀಚಿನ ವಿಷಯಗಳನ್ನು ನ್ಯಾಯಾಲಯದ ಮುಂದೆ ದಾಖಲಿಸಬೇಕು ಎಂದು ಮು.ನ್ಯಾ.ಲಲಿತ್ ತಿಳಿಸಿದರು.
ತನ್ನ ಅರ್ಜಿಯನ್ನು ಹಿಂದೆಗೆದುಕೊಳ್ಳಲು ಮತ್ತು ಪರಿಷ್ಕೃತ ಅರ್ಜಿಯನ್ನು ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ಅರ್ಜಿದಾರರಿಗೆ ಅನುಮತಿಯನ್ನು ನೀಡಿತು.