ಜೆರುಸಲೇಂ: ಹುಟ್ಟುಹಬ್ಬದ ಪಾರ್ಟಿಯಲ್ಲಿ ಉಂಟಾದ ಜಗಳದಲ್ಲಿ ಈಶಾನ್ಯ ಭಾರತದ ಯುವಕನನ್ನು ಇರಿದು ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಈತ ಒಂದು ವರ್ಷದ ಹಿಂದಷ್ಟೇ ಇಸ್ರೇಲ್‍ಗೆ ಹೋಗಿದ್ದ ಎಂದು ತಿಳಿದುಬಂದಿದೆ. ಇಸ್ರೇಲ್‍ನ ಕ್ರಿಯಾತ್ ಶ್ಮೋನಾ ಎಂಬ ನಗರದಲ್ಲಿ ಈ ಘಟನೆ ನಡೆದಿದೆ.
ಮೃತ ಯುವಕ ಯೋಯೆಲ್ ಲೆಹಿಂಗಾಹೆಲ್ (18) ಎಂದು ಗುರುತಿಸಲಾಗಿದ್ದು, ಈ ವರ್ಷದ ಆರಂಭದಲ್ಲಿ ಕುಟುಂಬದ ಜತೆ ಭಾರತದಿಂದ ಇಸ್ರೇಲ್‍ಗೆ ಹೋಗಿದ್ದ. ನಾಫ್ ಹಗಲಿಲ್ ಎಂಬಲ್ಲಿನ ತನ್ನ ಮನೆಯಿಂದ ಉತ್ತರಕ್ಕೆ ಸ್ನೇಹಿತನನ್ನು ಭೇಟಿ ಮಾಡುವ ಸಲುವಾಗಿ ಆಗಮಿಸಿದ್ದ ಎಂದು ಮಾಧ್ಯಮ ವರದಿಗಳು ಹೇಳಿವೆ.
20ಕ್ಕೂ ಹೆಚ್ಚು ಮಂದಿ ಯುವಕರಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಈ ಘರ್ಷಣೆ ಸಂಭವಿಸಿತು ಎನ್ನಲಾಗಿದೆ. ಶುಕ್ರವಾರ ಮುಂಜಾನೆ 7 ಗಂಟೆ ಸುಮಾರಿಗೆ ಆತನ ಸ್ನೇಹಿತ ಕರೆ ಮಾಡಿ ಹಿಂದಿನ ರಾತ್ರಿ ನಡೆದ ಗಲಾಟೆಯಲ್ಲಿ ಯೋಯೆಲ್ ಲೆಹಿಂಗಾಹೆಲ್ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾನೆ ಎಂದು ಹೇಳಿದ್ದಾಗಿ ಇಸ್ರೇಲ್‍ನಲ್ಲಿ ಭಾರತದಿಂದ ವಲಸೆ ಹೋಗಿರುವ ಯಹೂದಿ ಸಮುದಾಯದ ಜತೆ ಕಾರ್ಯ ನಿರ್ವಹಿಸುತ್ತಿರುವ ಮೀರ್ ಪಲ್ಟಿಯೆಲ್ ಹೇಳಿದ್ದಾರೆ.
ಕುಟುಂಬದವರು ಆಸ್ಪತ್ರೆಗೆ ತೆರಳುವ ಮುನ್ನವೇ ಆತ ಮೃತಪಟ್ಟಿದ್ದಾಗಿ ಮಾಹಿತಿ ಬಂದಿದೆ. ಈ ಸಂಬಂಧ ಪೊಲೀಸರು 15 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.