ನವದೆಹಲಿ: ಬಹುನಿರೀಕ್ಷಿತ ಹಿಜಾಬ್ ವಿವಾದ(Hijab row) ಕುರಿತು ಸುಪ್ರೀಂ ಕೋರ್ಟ್ ನ ನ್ಯಾಯಪೀಠ ಗುರುವಾರ ಭಿನ್ನ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುದೀರ್ಘ ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ ಒಮ್ಮತದ ತೀರ್ಮಾನಕ್ಕೆ ಬರಲಾಗದೆ ಇಂದು ಭಿನ್ನ ತೀರ್ಪು ನೀಡಿ ಮುಂದಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ(CJI) ವರ್ಗಾವಣೆ ಮಾಡಿದೆ.
ಮುಂದೆ ವಿಸ್ತ್ರೃತ ಪೀಠ ರಚನೆ ಮಾಡಲಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಅಲ್ಲಿಯವರೆಗೂ ಕರ್ನಾಟಕ ಹೈಕೋರ್ಟ್ ತೀರ್ಪಿನ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿದ್ದಾರೆ.
ಇಂದು ಅಂತಿಮ ತೀರ್ಪು ಪ್ರಕಟವಾಗಬೇಕಿತ್ತು. ಸುಪ್ರೀಂ ಕೋರ್ಟ್ ನ ನ್ಯಾಯಪೀಠದಲ್ಲಿದ್ದ ಇಬ್ಬರು ನ್ಯಾಯಮೂರ್ತಿಗಳು ಹಿಜಾಬ್ ವಿವಾದ ಕುರಿತು ಭಿನ್ನ ತೀರ್ಪುಗಳನ್ನು ನೀಡಿರುವುದರಿಂದ ನಿರ್ದಿಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಈ ವಿಷಯವನ್ನು ಸೂಕ್ತ ನಿರ್ದೇಶನಕ್ಕಾಗಿ ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಉಲ್ಲೇಖಿಸಲಾಗಿದೆ ಎಂದು ನ್ಯಾಯಮೂರ್ತಿ ಹೇಮಂತ್ ಗುಪ್ತಾ ಹೇಳಿದ್ದಾರೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಹೇಮಂತ್ ಗುಪ್ತ ತಳ್ಳಿಹಾಕಿದರೆ ನ್ಯಾಯಮೂರ್ತಿ ಸುಧಾಂಶು ಧುನಿಯಾ ಮೇಲ್ಮನವಿ ಸಲ್ಲಿಕೆಯನ್ನು ಪುರಸ್ಕರಿಸಿದರು.
ನ್ಯಾಯಮೂರ್ತಿ ಧುಲಿಯಾ, ಮೇಲ್ಮನವಿ ಸಲ್ಲಿಕೆಯನ್ನು ಪುರಸ್ಕರಿಸಿ ಕರ್ನಾಟಕ ಸರ್ಕಾರದ ಫೆಬ್ರವರಿ 5ರ ಆದೇಶವನ್ನು ತಳ್ಳಿಹಾಕಿದರು. ಹಿಜಾಬ್ ಧರಿಸುವುದು ಅಂತಿಮವಾಗಿ ವ್ಯಕ್ತಿಯ ವೈಯಕ್ತಿಕ ಆಯ್ಕೆ. ಬಿಜೊಯ್ ಎಮೆನ್ಯುಯೆಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ಹಾಕಿರುವ ಅನುಪಾತ ಇದನ್ನು ಸೂಚಿಸುತ್ತದೆ. ಇಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ನನಗೆ ಮುಖ್ಯವಾಗಿ ಕಾಣುತ್ತದೆ. ಹೆಣ್ಣು ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ನೂ ಹಲವು ಸಮಸ್ಯೆಗಳು ಆಕೆಗಿರುತ್ತವೆ, ಹಾಗಿರುವಾಗ ನಾವು ಶಿಕ್ಷಣದಲ್ಲಿ ಮತ್ತಷ್ಟು ನಿರ್ಬಂಧ ಹಾಕಿ ಅವಳ ಜೀವನವನ್ನು ಉತ್ತಮಗೊಳಿಸುತ್ತೇವೆಯೇ ಎಂದು ಪ್ರಶ್ನಿಸಿದರು.
ನ್ಯಾಯಮೂರ್ತಿಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿ ಅಲ್ಲಿ ಸೂಕ್ತ ಪೀಠ ರಚಿಸುವಂತೆ ಸೂಚಿಸಿದರು.
ಕಳೆದ ಹತ್ತು ದಿನಗಳ ವ್ಯಾಪಕ ವಿಚಾರಣೆಯ ನಂತರ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಕಳೆದ ತಿಂಗಳು ಸೆಪ್ಟೆಂಬರ್ ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.
ಹಿಜಾಬ್ ನಿಷೇಧದ ವಿರುದ್ಧ ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ, ಸಲ್ಮಾನ್ ಖುರ್ಷಿದ್, ರಾಜೀವ್ ಧವನ್, ಸಂಜಯ್ ಹೆಗ್ಡೆ, ದೇವದತ್ ಕಾಮತ್ ವಾದ ಮಂಡಿಸಿದ್ದು ಈ ವಿಚಾರಣೆ ಸಾಕ್ಷಿಯಾಗಿತ್ತು. ಕರ್ನಾಟಕ ಸರ್ಕಾರ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕ ಎಜಿ ಪ್ರಭುಲಿಂಗ ನಾವಡಗಿ ಮತ್ತು ಎಎಸ್‌ಜಿ ಕೆ.ಎಂ.ನಟರಾಜ್ ಅವರು ವಾದ ಮಂಡಿಸಿದ್ದರು.
ಕಳೆದ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ , ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯ ಭಾಗವಲ್ಲ ಎಂದು ತೀರ್ಪು ನೀಡಿತ್ತು. ಇದನ್ನು ಸಂವಿಧಾನದ 25 (ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮ ಪ್ರಚಾರದ ಹಕ್ಕು) ಅಡಿಯಲ್ಲಿ ರಕ್ಷಿಸಬಹುದು. ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ನ್ನು ಸೂಚಿಸಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಒಂದು ವಿಭಾಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿತ್ತು. ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಹಿಜಾಬ್ ಅಥವಾ ಸಾಂಪ್ರದಾಯಿಕ ಇಸ್ಲಾಮಿಕ್ ಗುರುತಿನ ವಸ್ತ್ರವನ್ನು ಧರಿಸಲು ಅವಕಾಶ ನೀಡದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು.