ಮುಂಬೈ: ಅಧಿಕೃತ ರಹಸ್ಯಗಳ ಕಾಯ್ದೆ (ಒಎಸ್‌ಎ)ಯಡಿ ಪೊಲೀಸ್ ಠಾಣೆಯು ನಿಷೇಧಿತ ಸ್ಥಳವಲ್ಲ,ಹೀಗಾಗಿ ಪೊಲೀಸ್ ಠಾಣೆಯೊಳಗೆ ವೀಡಿಯೊ ಚಿತ್ರೀಕರಣ ಅಪರಾಧವಾಗುವುದಿಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯ(Bombay High Court)ದ ನಾಗ್ಪುರ(Nagpur) ಪೀಠವು ಅಭಿಪ್ರಾಯಿಸಿದೆ.
2018,ಮಾರ್ಚ್‌ನಲ್ಲಿ ಪೊಲೀಸ್ ಠಾಣೆಯೊಳಗೆ ವೀಡಿಯೊ ಚಿತ್ರೀಕರಿಸಿದ್ದಕ್ಕಾಗಿ ಒಎಸ್‌ಎ
ಅಡಿ ರವೀಂದ್ರ ಉಪಾಧ್ಯಾಯ ಎನ್ನುವವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು
ನ್ಯಾಯಮೂರ್ತಿಗಳಾದ ಮನೀಷ ಪಿತಳೆ ಮತ್ತು ವಾಲ್ಮೀಕಿ ಮೆನೆಝಿಸ್ ಅವರ ಪೀಠವು ಈ ವರ್ಷದ
ಜುಲೈನಲ್ಲಿ ರದ್ದುಗೊಳಿಸಿದೆ.
ನಿಷೇಧಿತ ಸ್ಥಳಗಳಲ್ಲಿ ಬೇಹುಗಾರಿಕೆಗೆ ಸಂಬಂಧಿಸಿದ
ಕಾಯ್ದೆಯ 3 ಮತ್ತು 2(8) ಕಲಮ್‌ಗಳನ್ನು ತನ್ನ ಆದೇಶದಲ್ಲಿ ಪ್ರಸ್ತಾಪಿಸಿರುವ
ಪೀಠವು,ಕಾಯ್ದೆಯಲ್ಲಿ ಪೊಲೀಸ್ ಠಾಣೆಯನ್ನು ನಿಷೇಧಿತ ಸ್ಥಳವೆಂದು ನಿರ್ದಿಷ್ಟವಾಗಿ
ಉಲ್ಲೇಖಿಸಲಾಗಿಲ್ಲ ಎಂದು ಬೆಟ್ಟು ಮಾಡಿದೆ.
ನೆರೆಮನೆಯಾತನೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ ದೂರು ಸಲ್ಲಿಸಿದ್ದ ಉಪಾಧ್ಯಾಯ ತನ್ನ ಪತ್ನಿಯೊಂದಿಗೆ ವಾರ್ಧಾ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರು. ನೆರೆಮನೆಯಾತನೂ ಅವರ ವಿರುದ್ಧ ಅದೇ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದ. ಆ ಸಂದರ್ಭ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೀಡಿಯೊವನ್ನು ಉಪಾಧ್ಯಾಯ ತನ್ನ ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದುದು ಪೊಲೀಸರಿಗೆ ಗೊತ್ತಾದಾಗ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.