ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 11 ಅಪರಾಧಿಗಳಿಗೆ ನೀಡಲಾದ ಶಿಕ್ಷೆ ವಿನಾಯಿತಿಯನ್ನು ಪ್ರಶ್ನಿಸಿರುವ ಮಹಿಳಾ ಸಂಘಟನೆಯ ಮತ್ತೊಂದು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಸಿ.ಟಿ.
ರವಿಕುಮಾರ್ ಅವರಿದ್ದ ಪೀಠ ಪ್ರಮುಖ ಅರ್ಜಿ ಜೊತೆ ಈ ಅರ್ಜಿಯ ವಿಚಾರಣೆಯನ್ನು ನಡೆಸುವುದಾಗಿ ಹೇಳಿದೆ.
ಗುಜರಾತ್ ಸರ್ಕಾರದ ಅಫಿಡವಿಟ್‌ಗೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಅರ್ಜಿದಾರರಿಗೆ ಸಮಯ ನೀಡಿದ್ದು, ನವೆಂಬರ್ 29 ರಂದು ವಾದವನ್ನು ಆಲಿಸುವುದಾಗಿ ಹೇಳಿದೆ.
ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳ ಶಿಕ್ಷೆ ವಿನಾಯಿತಿ ಪ್ರಶ್ನಿಸಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ ಸಲ್ಲಿಸಿರುವ ಅರ್ಜಿಯನ್ನು ಉನ್ನತ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
11 ಅಪರಾಧಿಗಳಿಗೆ ಕ್ಷಮಾದಾನ ನೀಡಿ, ಬಿಡುಗಡೆ ಮಾಡಿರುವ ತನ್ನ
ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ
(ಪಿಐಎಲ್) ಸಂಬಂಧಿಸಿದಂತೆ ಗುಜರಾತ್ ಸರ್ಕಾರ ಸಲ್ಲಿಸಿರುವ ಪ್ರತಿಕ್ರಿಯೆಯಲ್ಲಿ
ವಾಸ್ತವಾಂಶಗಳೇ ಕಾಣೆಯಾಗಿವೆ ಎಂದು ಅಕ್ಟೋಬರ್ 18 ರಂದು ಸುಪ್ರೀಂ ಕೋರ್ಟ್ ಹೇಳಿತ್ತು.
'ಗುಜರಾತ್
ಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹಲವಾರು ಪ್ರಕರಣಗಳಲ್ಲಿ ಈ ಹಿಂದೆ
ನೀಡಲಾಗಿರುವ ತೀರ್ಪುಗಳನ್ನು ಉಲ್ಲೇಖಿಸಲಾಗಿದೆ. ಅಫಿಡವಿಟ್‌ನಲ್ಲಿ ವಾಸ್ತವಾಂಶಗಳೇ
ಮರೆಯಾಗಿವೆ' ಎಂದು ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಸಿ.ಟಿ.ರವಿಕುಮಾರ್
ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠ ಹೇಳಿತ್ತು.