ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಾವಿನ ಪ್ರಕರಣ ಸಂಬಂಧ ನ್ಯಾಯಮೂರ್ತಿ ಎ.ಆರ್ಮುಗಸ್ವಾಮಿ ನೇತೃತ್ವದ ಆಯೋಗವು 500 ಪುಟಗಳ ವರದಿ ಸಿದ್ಧಪಡಿಸಿದೆ. ಅದರಲ್ಲಿ ಜಯಲಲಿತಾ ಆಪ್ತೆ ವಿ.ಕೆ.ಶಶಿಕಲಾ, ವೈದ್ಯ ಕೆ.ಎಸ್.ಶಿವಕುಮಾರ್, ಆಗ ಆರೋಗ್ಯ ಸಚಿವರಾಗಿದ್ದ ಸಿ.ವಿಜಯಭಾಸ್ಕರ್ ಮತ್ತು ಆರೋಗ್ಯ ಕಾರ್ಯದರ್ಶಿ ಜೆ.ರಾಧಾಕೃಷ್ಣನ್ ವಿರುದ್ಧ ತನಿಖೆಗೆ ಶಿಫಾರಸು ಮಾಡಿದೆ.
ಆಯೋಗವು ಜಯಲಿಲಿತಾ ಅವರು 2016ರ ಸೆಪ್ಟೆಂಬರ್ 22ರಂದು ಇದ್ದಕ್ಕಿದ್ದಂತೆ ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾದದ್ದು, ಅಲ್ಲಿ ನೀಡಲಾದ ಚಿಕಿತ್ಸೆ ಹಾಗೂ ಸಾವಿನ ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದೆ. ವೈದ್ಯರ ಸಲಹೆ ಬಳಿಕವೂ ಜಯಲಲಿತಾ ಅವರಿಗೆ ಆಯಂಜಿಯೋಪ್ಲಾಸ್ಟಿ ಮಾಡಿಲ್ಲವೇಕೆ ಮತ್ತು ಇಂಗ್ಲೆಂಡ್‌ನ ಡಾ.ರಿಚರ್ಡ್ ಬೇಲೆ ಅವರು ಸಲಹೆ ನೀಡಿದ್ದರೂ, ಮಾಜಿ ಮುಖ್ಯಮಂತ್ರಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕರೆದೊಯ್ಯುವ ಪ್ರಯತ್ನವನ್ನು ಏಕೆ ಮಾಡಿಲ್ಲ ಎಂದು ಪ್ರಶ್ನಿಸಿದೆ.
'ಮೇಲಿನ ಅಂಶಗಳು, ದೋಷಾರೋಪ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ನಿರ್ಧಾರಕ್ಕೆ ಬರಲು ಅಡ್ಡಿಯಾಗಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಆಯೋಗವು ವಿ.ಕೆ.ಶಶಿಕಲಾ, ಕೆ.ಎಸ್.ಶಿವಕುಮಾರ್, ಸಿ.ವಿಜಯಭಾಸ್ಕರ್ ಮತ್ತು ಜೆ.ರಾಧಾಕೃಷ್ಣನ್ ವಿರುದ್ಧ ತನಿಖೆಗೆ ಆದೇಶಿಸಲು ತೀರ್ಮಾನಿಸಿದೆ' ಎಂದು ಆರುಮುಗಸ್ವಾಮಿ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
2011ರಲ್ಲಿ ಶಶಿಕಲಾ ಅವರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಅದಾದ ನಂತರ ಜಯಲಲಿತಾ ಮತ್ತು ಶಶಿಕಲಾ ನಡುವೆ ಯಾವುದೇ 'ಸೌಹಾರ್ದ ಸಂಬಂಧ' ಇರಲಿಲ್ಲ ಎಂಬುದಾಗಿಯೂ ವರದಿಯಲ್ಲಿ ತಿಳಿಸಲಾಗಿದೆ. ಆದಾಗ್ಯೂ, ಜಯಲಲಿತಾ ಅವರನ್ನು ಅವರ ನಿವಾಸ ಪೋಯಸ್ ಗಾರ್ಡನ್‌ನಿಂದ ಆಸ್ಪತ್ರೆಗೆ ದಾಖಲಿಸುವಾಗ ಶಶಿಕಲಾ ಹಾಗೂ ಇತರರಿಂದ ಯಾವುದೇ ದೋಷವಾಗಿರುವುದನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ. ಜಯಲಲಿತಾ ಅವರು ಪೋಯಸ್ ಗಾರ್ಡನ್‌ನ ಮೊದಲ ಮಹಡಿಯಲ್ಲಿದ್ದಾಗ ಪ್ರಜ್ಞೆ ತಪ್ಪಿದ್ದರು. ನಂತರ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.