ಪ್ರಯಾಗರಾಜ್ : 'ಧಾರ್ಮಿಕ ಮತಾಂತರ ಹಾಗೂ ಬಾಂಗ್ಲಾದೇಶದ ವಲಸಿಗರಿಂದಾಗಿಯೇ ದೇಶದಲ್ಲಿ ಜನಸಂಖ್ಯಾ ಅಸಮತೋಲನ ಸೃಷ್ಟಿಯಾಗಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ದೂರಿದ್ದಾರೆ.
ಇಲ್ಲಿ ಮುಕ್ತಾಯಗೊಂಡ ನಾಲ್ಕು ದಿನಗಳ ಆರ್‌ಎಸ್‌ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಸಂಘವು ಮತಾಂತರದ ಕುರಿತು ಜನರಲ್ಲಿ ಅರಿವು ಮೂಡಿಸಲಿದೆ. ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರಲು ಪ್ರಯತ್ನಿಸಲಿದೆ' ಎಂದು ಹೇಳಿದ್ದಾರೆ.
'ಮತಾಂತರ ತಡೆಗಟ್ಟುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕಿದೆ. ಬಲವಂತವಾಗಿ ಹಾಗೂ ಆಮಿಷ ಒಡ್ಡಿ ಮತಾಂತರ ಮಾಡುವುದಕ್ಕೆ ಕಾಯ್ದೆಯ ಮೂಲಕ ಕಡಿವಾಣ ಹಾಕುವ ಕೆಲಸವನ್ನು ಉತ್ತರಪ್ರದೇಶ ಸೇರಿದಂತೆ ಕೆಲ ರಾಜ್ಯಗಳು ಮಾಡಿವೆ' ಎಂದಿದ್ದಾರೆ.
'ಒಳನುಸುಳುವಿಕೆ ಅಥವಾ ವಲಸೆ ಕೂಡ ಜನಸಂಖ್ಯಾ ಅಸಮತೋಲನಕ್ಕೆ ಕಾರಣವಾಗಿದೆ. ಉತ್ತರ ಬಿಹಾರದ ಪುರ್ನಿಯಾ ಮತ್ತು ಕತಿಹಾರ್ ಹಾಗೂ ಇತರ ರಾಜ್ಯಗಳಲ್ಲಿ ಇದನ್ನು ಕಾಣಬಹುದಾಗಿದೆ. ಮತಾಂತರಗೊಂಡವರನ್ನು ಮೀಸಲಾತಿಯಿಂದ ಹೊರಗಿಡಬೇಕಿದೆ' ಎಂದು ತಿಳಿಸಿದ್ದಾರೆ.
'ಮಹಿಳೆಯರು ಎಲ್ಲಾ ವಲಯಗಳಿಗೂ ಕಾಲಿಡುತ್ತಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲಿ ಹಿಂದೂ ಧರ್ಮದ ಮಹಿಳೆಯರ ಭಾಗವಹಿಸುವಿಕೆ ಹಾಗೂ ತೀರ್ಮಾನ ಕೈಗೊಳ್ಳುವಿಕೆಯನ್ನು ಉತ್ತೇಜಿಸುವ ಕುರಿತು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗಿದೆ' ಎಂದೂ ಹೇಳಿದ್ದಾರೆ.