ಪೆರ್ಲ: ಪ್ರತಿ ಊರಿನಲ್ಲಿಯೂ ವಿವಿಧ ಕಲಾ ಪ್ರಕಾರಗಳನ್ನು ಕಲಿತು, ಕಲಿಸುವ ಕೇಂದ್ರ ಇರಬೇಕು. ಸಮಾಜದ ಸಾಂಸ್ಕೃತಿಕ ಹಸಿವು ನೀಗಿಸುವ ಕಾರ್ಯ ನಡೆಯಬೇಕು. ಕಲೆಯಲ್ಲಿ ವ್ಯಸ್ತನಾದಾಗ ಮನಸ್ಸು ಕೆಟ್ಟ ವ್ಯಸನಕ್ಕಿಳಿಯದೆ ಸುಸಂಸ್ಕೃತ ಸಮಾಜ ರೂಪುಗೊಳ್ಳುವುದು ಎಂದು ಪೆರಡಾಲ ಶಾಲೆಯ ಶಿಕ್ಷಕ ಶ್ರೀಧರ ಭಟ್ ನುಡಿದರು.
ನಲ್ಕದ ವಾಗ್ದೇವಿ ಯಕ್ಷಗಾನ ಕಲಾ ಸಂಘದ ವತಿಯಿಂದ ನಡೆದ ಯಕ್ಷಗಾನ ಬಯಲಾಟ ಹಾಗೂ ಸಂಘದ ಹಿರಿಯ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಹಳ ಹಿಂದಿನಿಂದ ಕಲೆಯನ್ನು ಬೆಳೆಸಿದ ಹಿರಿಯರನ್ನು ಗೌರವಿಸುವ ಸಂಘದ ಕಾರ್ಯ ಶ್ಲಾಘನೀಯ. ಎಳೆಯ ಮಕ್ಕಳಲ್ಲಿ ಕಲಾ ಅಭಿರುಚಿ ಮೂಡಿಸುವ ಕಾರ್ಯ ಸಂಘದ ವತಿಯಿಂದ ಜರಗಬೇಕು. ಎಲ್ಲರ ಸಹಕಾರ ಅಗತ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಕಲಾವಿದ ನಾರಾಯಣ ಮಣಿಯಾಣಿ ಪಾಪಿತ್ತಡ್ಕ, ಗೋವಿಂದ ನಾಯ್ಕ ಕಾನ, ಈಶ್ವರ ನಾಯ್ಕ ಕೇರಿಮೂಲೆ, ಪೂವಪ್ಪ ಕುಲಾಲ್, ರಾಮಚಂದ್ರ ಭಟ್ ಕಡಪ್ಪು ಅವರನ್ನು ಶಾಲು,ಫಲಕ, ಹಣ್ಣುಹಂಪಲುಗಳನ್ನಿತ್ತು ಸನ್ಮಾನಿಸಲಾಯಿತು. ಪ್ರಗತಿಪರ ಕೃಷಿಕ ಕಿನಿಲ ಸುಬ್ರಾಯ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ಎಲ್ಲ ಚಟುವಟಿಕೆಗಳಿಗೆ ಪ್ರೊತ್ಸಾಹ ನೀಡುವುದಾಗಿ ನುಡಿದರು. ಸಂಘದ ಅಧ್ಯಕ್ಷ ಕೃಷ್ಣ ಮೂಲ್ಯ ಖಂಡಿಗೆ, ನಾರಾಯಣ ವರ್ಮುಡಿ ಅವರು ಉಪಸ್ಥಿತರಿದ್ದರು. ಸಂಘದ ಸದಸ್ಯ ಕಮಲಾಕ್ಷ ನಾಯಕ್ ಸ್ವಾಗತಿಸಿ, ಕಾರ್ಯದರ್ಶಿ ಶಂಕರ ಖಂಡಿಗೆ ವಂದಿಸಿದರು. ಶಿಕ್ಷಕಿ ಲಕ್ಷ್ಮಿ ಹಾಗೂ ಮಂಜುಶ್ರೀ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಘದ ಸದಸ್ಯರಿಂದ "ಕುಂಭಕರ್ಣ ಕಾಳಗ,ಇಂದ್ರಜಿತು ಕಾಳಗ "ಯಕ್ಷಗಾನ ಪ್ರದರ್ಶನ ನಡೆಯಿತು.