ಚೆನ್ನೈ: ಹೊಸದಾಗಿ ನಿರ್ಮಾಣ ಮಾಡಿದ ಮನೆಯನ್ನು ಪ್ರವೇಶಿಸುವ ಮುನ್ನ ಯಾವುದೇ ಕೆಟ್ಟ ದೃಷ್ಟಿ ಮನೆಯ ಮೇಲೆ ಬೀಳದಿರಲಿ ಎಂದು ಹುಂಜವನ್ನು ಬಲಿ ಕೊಡಲು ಹೋದ ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 70 ವರ್ಷದ ಕಾರ್ಮಿಕ ರಾಜೇಂದ್ರನ್ ಎಂದು ಗುರುತಿಸಲಾಗಿದೆ.
ಪಲ್ಲವರಂ ಬಳಿಯ ಪೊಜಿಚಲೂರ್ ಪ್ರದೇಶದಲ್ಲಿ ಟಿ. ಲೋಕೇಶ್ ಎಂಬುವರು ಹೊಸ ಮನೆ ನಿರ್ಮಿಸಿದ್ದು, ಅದರ ಗೃಹ ಪ್ರವೇಶ ಹಿನ್ನೆಲೆಯಲ್ಲಿ ಪೂಜಾ ವಿಧಾನಗಳನ್ನು ನಡೆಸಿಕೊಡಲು ರಾಜೇಂದ್ರನ್ ಎಂಬುವರನ್ನು ಸಹಾಯಕರನ್ನಾಗಿ ನೇಮಿಸಿಕೊಂಡಿದ್ದರು.
ಪೂಜೆ ನೆರವೇರಿಸಿ ರಾಜೇಂದ್ರನ್ ವಾಪಸ್ ಬಾರದೆ ಇದ್ದಾಗ, ಲೋಕೇಶ್ ಅವರನ್ನು ಹುಡುಕಿಕೊಂಡು ಹೋದರು. ಈ ವೇಳೆ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ತೋಡಿದ್ದ ಗುಂಡಿಯಲ್ಲಿ ರಕ್ತದ ಮಡುವಿನಲ್ಲಿ ರಾಜೇಂದ್ರನ್ ಬಿದ್ದಿರುವುದನ್ನು ಕಂಡು ದಿಗ್ಭ್ರಾಂತರಾದರು. ಹುಂಜವನ್ನು ಬಲಿ ಕೊಡಲು ಮೂರನೇ ಮಹಡಿಗೆ ಹೋದ ಸಂದರ್ಭದಲ್ಲಿ ಅಲ್ಲಿಂದ ಹಳ್ಳಕ್ಕೆ ಬಿದ್ದು ರಾಜೇಂದ್ರನ್ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಹುಂಜ ಬದುಕುಳಿದಿದೆ. ರಾಜೇಂದ್ರನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.