ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ), ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಕೆ.ಸಿ.ವೇಣುಗೋಪಾಲ್ ಅವರು, ಎಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರು, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಉಸ್ತುವಾರಿಗಳು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನು ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದಾರೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ 12 ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದ್ದು, ಚುನಾವಣೆ ಬಳಿಕ ನೂತನ ಅಧ್ಯಕ್ಷ ತಮ್ಮೊಂದಿಗೆ ಕಾರ್ಯನಿರ್ವಹಿಸುವ ನಾಯಕರ ಹೆಸರನ್ನು ಪ್ರಕಟಿಸಲಿದ್ದಾರೆ.
ಇದಕ್ಕೂ ಮುನ್ನ ಖರ್ಗೆ ತಮ್ಮ ಚೊಚ್ಚಲ ಭಾಷಣದಲ್ಲಿ, ‘ಬಾಬಾ ಸಾಹೇಬರ ಸಂವಿಧಾನವನ್ನು ಬದಲಿಸುವ ಯತ್ನ ನಡೆಯುತ್ತಿದ್ದು, ಕಾಂಗ್ರೆಸ್ ಅದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.
ನವ ಭಾರತದಲ್ಲಿ ನಿರುದ್ಯೋಗ, ಹಸಿವು ಹೆಚ್ಚಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಆದರೆ, ಸರ್ಕಾರ ವಿರೋಧ ಪಕ್ಷಗಳಿಲ್ಲದಂತೆ ಮಾಡಲು ಪ್ರಯತ್ನ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಜನರಿಗಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತದೆ.
ಉದಯಪುರದಲ್ಲಿ ಘೋಷಣೆ ಮಾಡಿದಂತೆ ಪಕ್ಷದ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ವಿಶೇಷ ಒತ್ತು ನೀಡಲು ಸಾಮಾಜಿಕ ಸಲಹಾ ಸಮಿತಿ ಇರಲಿದೆ ಎಂದು ಹೇಳಿದರು.
1969ರಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತನಾಗಿ ವೃತ್ತಿ ಜೀವನ ಆರಂಭಿಸಿದ ನಾನು ಇದೀಗ ಪಕ್ಷದ ಅಧ್ಯಕ್ಷನಾಗಿದ್ದೇನೆಂದರು.
ಇದೇ ವೇಳೆ ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ಅನ್ನು ಬಲಪಡಿಸಿದ ಸೋನಿಯಾ ಗಾಂಧಿಯವರ ಪ್ರಯತ್ನಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.