ಮುಂಬೈ: ಹುಡುಗಿಯರನ್ನು 'ಐಟಮ್' ಎಂದು ಕರೆಯುವುದು ಅವಹೇಳನಕಾರಿ ಎಂದು ಮುಂಬೈನ ವಿಶೇಷ ಕೋರ್ಟ್ ಕಿಡಿಕಾರಿದೆ. ಇದು ಲೈಂಗಿಕ ದುರುದ್ದೇಶದಿಂದ ಆಕೆಯನ್ನು ಗುರಿಯಾಗಿಸಿ ಅಪಮಾನಿಸುವುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.
2015ರ ಲೈಂಗಿಕ ದೌರ್ಜನ್ಯ ಪ್ರಕರಣ ಒಂದಕ್ಕೆ ಸಂಬಂಧಿಸಿ ತೀರ್ಪು ನೀಡುವ ಸಂದರ್ಭ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಕ್ಕೆ ಯುವಕನಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈ ಆದೇಶವನ್ನು ಅಕ್ಟೋಬರ್ 20ರಂದು ನೀಡಲಾಗಿದೆ.
ಆರೋಪಿ ಮೇಲೆ ಸಹಾನುಭೂತಿಯನ್ನು ತೋರಿಸಲು ನಿರಾಕರಿಸಿದ ಕೋರ್ಟ್, ಬೀದಿ ಬದಿಯ 'ರೋಮಿಯೊ'ಗಳಿಗೆ ತಕ್ಕ ಪಾಠ ಕಲಿಸಬೇಕು. ಮುಂದೆ ಇಂತಹ ಅಸಭ್ಯ ವರ್ತನೆ ತೋರದಂತೆ ಎಚ್ಚರಿಕೆಯಾಗಬೇಕು ಎಂದು ನ್ಯಾಯಮೂರ್ತಿ ಎ.ಜೆ. ಅನ್ಸಾರಿ ತಿಳಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೊ) ಅಡಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಿದ್ದಾರೆ.
2015ರ ಜುಲೈ 14ರಂದು ಸಬ್‌ಅರ್ಬನ್ ಮುಂಬೈನಲ್ಲಿ 25 ವರ್ಷದ ಆರೋಪಿಯು ಬಾಲಕಿಯನ್ನು 'ಐಟಮ್' ಎಂದು ಕರೆದು, ಜಡೆ ಹಿಡಿದು ಎಳೆದಾಡಿದ್ದ. ಆಗ ಬಾಲಕಿಗೆ 16 ವರ್ಷ ವಯಸ್ಸು. ಬಾಲಕಿ ಶಾಲೆಯಿಂದ ಹಿಂತಿರುಗುತ್ತಿದ್ದಾಗ ಈ ಕೃತ್ಯ ನಡೆದಿತ್ತು.
ಆರೋಪಿಯ ವರ್ತನೆ ಸಂಪೂರ್ಣವಾಗಿ ಅನುಚಿತವಾಗಿದೆ. ಆತ ದುರುದ್ದೇಶದಿಂದಲೇ ಆಕೆಯ ಜಡೆಯನ್ನು ಹಿಡಿದು ಎಳೆದಿದ್ದಾನೆ ಮತ್ತು ಆಕೆಯನ್ನು 'ಐಟಮ್' ಎಂದು ಕರೆದಿದ್ದಾನೆ. ಇದು ಬಾಲಕಿಯನ್ನು ಲೈಂಗಿಕವಾಗಿ ಗುರಿಯಾಗಿಸಿ ಮಾಡಿದ ಅಪಮಾನ ಎಂಬುದ ಸಾಬೀತು ಮಾಡುತ್ತದೆ ಎಂದು ನ್ಯಾ. ಅನ್ಸಾರಿ ಹೇಳಿದ್ದಾರೆ.
ಐಟಮ್ ಎಂಬ ಪದವನ್ನು ಸಾಮಾನ್ಯವಾಗಿ ಹುಡುಗರು ಹುಡುಗಿಯರನ್ನು ಉದ್ದೇಶಿ ಅವಹೇಳನಕಾರಿಯಾಗಿ ಕರೆಯುವುದಾಗಿದೆ. ಇದು ಲೈಂಗಿಕ ದುರುದ್ದೇಶ ಹೊಂದಿದ ವರ್ತನೆಯಾಗಿದೆ. ಹುಡುಗಿಯನ್ನು 'ಐಟಮ್' ಎಂದು ಕರೆಯುವುದು ಖಂಡಿತವಾಗಿಯೂ ಅವಹೇಳನವಾಗಿದೆ ಎಂದಿದ್ದಾರೆ.
ಆರಂಭದಲ್ಲಿ ಕಿರುಕುಳ ನೀಡದಂತೆ ಬಾಲಕಿ ಎಚ್ಚರಿಕೆ ಕೊಟ್ಟಿದ್ದಳು. ನಂತರ ಆರೋಪಿ ಆಕೆಯ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಿ ನಿಂದಿಸಿದ್ದ ಮತ್ತು ಕೂದಲನ್ನು ಹಿಡಿದು ಎಳೆದಾಡಿದ್ದ. ಬಳಿಕ ವಿದ್ಯಾರ್ಥಿನಿ ಸಹಾಯವಾಣಿ 100ಕ್ಕೆ ಕರೆ ಮಾಡಿ ರಕ್ಷಣೆ ನೀಡುವಂತೆ ಕೋರಿದ್ದಳು. ಪೊಲೀಸರು ಸ್ಥಳಕ್ಕೆ ಬಂದಾಗ ಆರೋಪಿ ಪರಾರಿಯಾಗಿದ್ದ. ಮನೆಗೆ ಬಂದ ಬಾಲಕಿ ಕೃತ್ಯದ ಬಗ್ಗೆ ತಂದೆಗೆ ತಿಳಿಸಿದ್ದಳು. ಬಳಿಕ ಮುಂಬೈನ ಸಕಿನಕ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ನಂತರ ಆರೋಪಿಯನ್ನು ಬಂಧಿಸಲಾಗಿತ್ತು ಮತ್ತು ಜಾಮೀನು ಆಧಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಸಿನಿಮಾ ರಂಗದಲ್ಲಿ 'ಐಟಮ್' ಪದ ಹೆಚ್ಚು ಬಳಕೆಯಲ್ಲಿದೆ.