ಚಂಡೀಗಢ: ಡ್ರೋನ್ ಮೂಲಕ ಡ್ರಗ್ಸ್, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ರವಾನಿಸುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ಸವಾಲಾಗಿದ್ದು, ಈ ವರ್ಷ ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ಇದುವರೆಗೆ ಈ ರೀತಿಯ 150ಕ್ಕೂ ಹೆಚ್ಚು ಚಟುವಟಿಕೆಗಳನ್ನು ಗಮನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ದ್ರವ್ಯ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಳ್ಳಸಾಗಣೆಗೆ ಡ್ರೋನ್‌ಗಳನ್ನು ಬಳಸುವುದು ಮೊದಲ ಬಾರಿಗೆ 2019 ರಲ್ಲಿ ಪಂಜಾಬ್‌ನಲ್ಲಿ ಗಮನಕ್ಕೆ ಬಂತು.
ಪಾಕಿಸ್ತಾನದೊಂದಿಗಿನ 553 ಕಿ.ಮೀ ವ್ಯಾಪ್ತಿಯ ಗಡಿ ಕಾವಲು ಕಾಯುತ್ತಿರುವ ಗಡಿ ಭದ್ರತಾ ಪಡೆ, ಈ ವರ್ಷ 10 ಡ್ರೋನ್‌ಗಳನ್ನು ಹೊಡೆದುರುಳಿಸಿದೆ. ಕಳೆದ ವಾರ ಮೂರು ಹಾಗೂ ಹಲವು ಮಾನವ ರಹಿತ ವೈಮಾನಿಕ ವಾಹನ ಅತಿಕ್ರಮಿಸುವುದನ್ನು ತಡೆದಿದೆ. ಈವರೆಗೆ 150ಕ್ಕೂ ಹೆಚ್ಚು ಡ್ರೋನ್ ಚಟುವಟಿಕೆ ಗುರುತಿಸಲಾಗಿದೆ ಎಂದು ಬಿಎಸ್‌ಎಫ್ ನ(ಪಂಜಾಬ್ ಗಡಿ) ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅ. 14 ರಂದು ಅಮೃತಸರದ ಶಾಹಪುರ್ ಗಡಿ ಹೊರಠಾಣೆ ಬಳಿ ಒಂದು ಡ್ರೋನ್ ಹೊಡೆದುರುಳಿಸಲಾಯಿತು. ಅ. 16 ಮತ್ತು 17 ರಂದು ಅಮೃತಸರ ಸೆಕ್ಟರ್‌ನಲ್ಲಿ ಎರಡು ಹೊಡೆದುರುಳಿಸಲಾಯಿತು ಎಂದರು.
ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ಬೆಂಬಲಿತ ಕಳ್ಳಸಾಗಾಣಿಕೆದಾರರು ಅತ್ಯಾಧುನಿಕ ಚೀನಾದ ಡ್ರೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.