ನವದೆಹಲಿ: 'ಕರ್ನಾಟಕ, ಕೇರಳ, ಗೋವಾ, ತಮಿಳುನಾಡು, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಲ್ಲಿ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶದ 56,825 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡಿದೆ.
ಆದರೆ, ರಾಜ್ಯ ಸರ್ಕಾರಗಳ ತಕರಾರಿನಿಂದಾಗಿ ಕರಡು ಅಧಿಸೂಚನೆ ಅಂತಿಮಗೊಳಿಸಲು ಸಾಧ್ಯ
ವಾಗಿಲ್ಲ' ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಅಸಹಾಯಕತೆ ವ್ಯಕ್ತಪಡಿಸಿದೆ.
ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಲ್ಲಿ ಅನಗತ್ಯ ವಿಳಂಬವಾಗುತ್ತಿದೆ ಎಂದು ಆರೋಪಿಸಿ 'ಗೋವಾ ಫೌಂಡೇಷನ್' ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಮೆಟ್ಟಿಲೇರಿದೆ. ಈ ಕರಡು ಅಧಿಸೂಚನೆಯನ್ನು ಆರು ತಿಂಗಳಲ್ಲಿ ಅಂತಿಮಗೊಳಿಸಬೇಕು ಎಂದು ನ್ಯಾಯಮಂಡಳಿಯ ಪ್ರಧಾನ ಪೀಠವು ಈ ಹಿಂದೆ ಪರಿಸರ ಸಚಿವಾಲಯಕ್ಕೆ ಸೂಚಿಸಿತ್ತು. ಈ ಸಂಬಂಧ ಕೈಗೊಂಡ ಕ್ರಮಗಳ ಪ್ರಮಾಣಪತ್ರವನ್ನು ಪರಿಸರ ಸಚಿವಾಲಯವು ಎನ್‌ಜಿಟಿಗೆ ಸೋಮವಾರ ಸಲ್ಲಿಸಿದೆ.
ಪ್ರಮಾಣಪತ್ರದಲ್ಲಿ ಏನಿದೆ: ಪಶ್ಚಿಮ ಘಟ್ಟ ಸಂರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರೊ.ಮಾಧವ ಗಾಡ್ಗೀಳ್ ಸಮಿತಿ 2010ರ ಮಾರ್ಚ್ 4ರಂದು ವರದಿ ಸಲ್ಲಿಸಿತ್ತು. ಬಳಿಕ 2012ರಲ್ಲಿ ಡಾ.ಕೆ.ಕಸ್ತೂರಿ ರಂಗನ್ ನೇತೃತ್ವದ ಉನ್ನತಾಧಿಕಾರಿ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ಯ ಶಿಫಾರಸಿನ ಮೇರೆಗೆ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಯನ್ನು 2018ರಲ್ಲಿ ಪ್ರಕಟಿಸಲಾಗಿತ್ತು. ಈ ಕರಡು ಅಧಿಸೂಚನೆಯನ್ನು 2022ರ ಜೂನ್ 30ರೊಳಗೆ ಅಂತಿಮಗೊಳಿಸಬೇಕಿತ್ತು. ರಾಜ್ಯಗಳು ಅಭಿಪ್ರಾಯ ನೀಡದ ಕಾರಣ ಅಂತಿಮಗೊಳ್ಳಲಿಲ್ಲ. ಪರಿಸರ ಸಚಿವಾಲಯವು ಜುಲೈ 6ರಂದು ಮತ್ತೆ ಕರಡು ಅಧಿಸೂಚನೆಯನ್ನು ಹೊರಡಿಸಿದ್ದು, ಆಕ್ಷೇಪಣೆ ಗಳನ್ನು ಆಹ್ವಾನಿಸಿದೆ. ಕರಡು ಅಧಿಸೂಚನೆಯನ್ನು ಅಂತಿಮಗೊಳಿಸಲು ರಾಜ್ಯ ಸರ್ಕಾರಗಳ ಜತೆಗೆ ನಿರಂತರ ಸಮಾಲೋಚನೆ ನಡೆಸಲಾಗುತ್ತಿದೆ.
ರಾಜ್ಯಗಳ ಜತೆಗೆ ಚರ್ಚೆ: ರಾಜ್ಯಗಳ ಆಕ್ಷೇಪದ ಬಗ್ಗೆ ಪರಿಶೀಲನೆ ನಡೆಸಲು ಸಚಿವಾಲಯದ ನಿವೃತ್ತ ಮಹಾನಿರ್ದೇಶಕರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿ ವರದಿ ನೀಡುವ ಗಡುವನ್ನು 2023ರ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಈ ಸಮಿತಿಯು ಕರ್ನಾಟಕ ಹಾಗೂ ಗೋವಾದ ಪಶ್ಚಿಮ ಘಟ್ಟಗಳಿಗೆ ಮೇ 14 ಹಾಗೂ ಮೇ 15ಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಮಾಲೋಚಿಸಿ ಪ್ರಾಥಮಿಕ ಮಾಹಿತಿ ಪಡೆದಿದೆ.ಕರ್ನಾಟಕ, ತಮಿಳುನಾಡು, ಗೋವಾ ಹಾಗೂ ಗುಜರಾತ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಅರಣ್ಯ ಇಲಾಖೆಗಳ ಮುಖ್ಯಸ್ಥರ ಜತೆಗೆ ಮುಂದಿನ ತಿಂಗಳಲ್ಲಿ ಸಭೆಗಳನ್ನು ನಡೆಸಲಿದೆ. ಜತೆಗೆ, ಪಶ್ವಿಮ ಘಟ್ಟಗಳಿಗೆ ಭೇಟಿ ನೀಡಿ ಅಹವಾಲು ಆಲಿಸಿ ವಾಸ್ತವ ಸಂಗತಿಗಳನ್ನು ಅರಿಯಲಿದೆ. ಬಳಿಕ ಶಿಫಾರಸುಗಳನ್ನು ಸಲ್ಲಿಸಲಿದೆ ಎಂದು ಸಚಿವಾಲಯವು ಪ್ರಮಾಣಪತ್ರದಲ್ಲಿ ತಿಳಿಸಿದೆ.
ರಾಜ್ಯವಾರು ಪರಿಸರ ಸೂಕ್ಷ್ಮ ಪ್ರದೇಶದ ವಿಸ್ತೀರ್ಣ (ಚ.ಕಿ.ಮೀಗಳಲ್ಲಿ)
ರಾಜ್ಯಗಳು; ವಿಸ್ತೀರ್ಣ
ಗುಜರಾತ್; 449
ಮಹಾರಾಷ್ಟ್ರ; 17,340
ಗೋವಾ; 1,461
ಕರ್ನಾಟಕ; 20,668
ತಮಿಳುನಾಡು; 6,914
ಕೇರಳ: 9,993