ಕಾನ್ಪುರ: ಹಿಂದುಳಿದ ಸಮುದಾಯಗಳ ನೆರವಿಗೆ ಕೇವಲ ಕಾನೂನುಗಳನ್ನು ರೂಪಿಸಿದರಷ್ಟೇ ಸಾಲದು, ಅವರನ್ನು ಮೇಲೆತ್ತುವುದಕ್ಕಾಗಿ ನಮ್ಮ ಮಾನಸಿಕತೆಯಲ್ಲಿ ಬದಲಾವಣೆಯಾಗಬೇಕಿದೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದರು.
ಇಲ್ಲಿನ ನಾನಾರಾವ್ ಉದ್ಯಾನದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ವಾಲ್ಮೀಕಿ ಸಮುದಾಯವು ತುಂಬಾ ಹಿಂದುಳಿದಿದ್ದು, ದುರ್ಬಲವಾಗಿದೆ. ಈ ಸಮುದಾಯ ಮುಂದುವರಿಯಬೇಕು. ದಲಿತರನ್ನು, ಪರಿಶಿಷ್ಟರನ್ನು ಮೇಲೆತ್ತಲು ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಇಂದು ಅವರಿಗೆ ರಾಜಕೀಯ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದೆ. ಹಾಗೆಯೇ ಸಾಮಾಜಿಕ ಸ್ವಾತಂತ್ರ್ಯವೂ ಸಿಗಬೇಕು. ಅದಕ್ಕಾಗಿ ಸರ್ಕಾರವು ಕಾನೂನುಗಳನ್ನು ಜಾರಿಗೊಳಿಸಿದೆ. ಇದಷ್ಟೇ ಸಾಲದು, ನಿಜವಾದ ಸಮಾನತೆ, ಸಾಮಾಜಿಕ ಸ್ವಾತಂತ್ರ್ಯ ಯಾರಿಗೆ ಸಲ್ಲಬೇಕೋ ಅವರಿಗೆ ಸಲ್ಲುವಂತೆ ಮಾಡಲು ಮನಸ್ಥಿತಿಗಳೂ ಬದಲಾಗಬೇಕು. ಇಲ್ಲದಿದ್ದರೆ ಕಾನೂನುಗಳಿಗೆ ಅರ್ಥವೇ ಇರುವುದಿಲ್ಲ' ಎಂದರು.
ವಾಲ್ಮೀಕಿ ಸಮುದಾಯದವರು ಆರೆಸ್ಸೆಸ್ ಶಾಖೆಗಳಿಗೆ ಭೇಟಿ ನೀಡಿ, ಸ್ವಯಂಸೇವಕರೊಂದಿಗೆ ಸಂವಾದ ನಡೆಸಬೇಕು ಎಂದು ಅವರು ಸಲಹೆ ನೀಡಿದರು.