ಕಾಸರಗೋಡು: ಎಣ್ಮಕಜೆ ಪಂಚಾಯಿತಿಯ ಬಜಕೂಡ್ಲು ಕಾನ ಪ್ರದೇಶದ ಸಾಯಿಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೆಗಾ ಶುಚೀಕರಣಕಾರ್ಯದಲ್ಲಿ ಸಾವಿರಕ್ಕೂ ಮಿಕ್ಕಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ ಕುಟುಂಬಗಳಿಗಾಗಿ ನಿರ್ಮಿಸಿರುವ 36ಮನೆಗಳು ಹಾಗೂ ಇಲ್ಲಿಗೆ ತೆರಳುವ ಹಾದಿ ಕಾಡು ಆವರಿಸಿದ್ದು, ಇದರಿಂದ ಇಲ್ಲಿ ಯಾವುದೇ ಕಾಮಗಾರಿ ನಡೆಸಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಪಂಚಾಯಿತಿ ಕುಟುಂಬಶ್ರೀ ಸದಸ್ಯರು, ಆಶಾ ಕಾರ್ಯಕರ್ತರು, ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಸದಸ್ಯರು, ಆರೋಗ್ಯ ಇಲಾಖೆ, ಹಸಿರು ಕ್ರಿಯಾ ಸೇನೆ, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಒಟ್ಟಾಗಿ ಸಾಯಿಗ್ರಾಮದಲ್ಲಿ ಶುಚೀಕರಣಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್‍ಚಂದ್ ಶುಚೀಕರಣ ಕಾರ್ಯಕ್ಕೆ ಚಾಲನೆ ನೀಡಿದರು. ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್, ಉಪಾಧ್ಯಕ್ಷೆ ಡಾ. ಫಾತಿಮತ್‍ಜಹಾನ್, ಜಿಪಂ ಸದಸ್ಯ ನಾರಾಯಣ ನಾಯ್ಕ್, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಅಧ್ಯಕ್ಷ ಅಬ್ದುಲ್‍ರಹಮಾನ್ ಪೆರ್ಲ, ಪೆರ್ಲ ನಾಲಂದ ಕಾಲೇಜು ಪ್ರಾಂಶುಪಾಲ ಡಾ. ಕಿಶೋರ್‍ಕುಮಾರ್ ರೈ ಶೇಣಿ, ಪಂಚಾಯಿತಿ ಸದಸ್ಯರು, ಆರೋಗ್ಯ ಇಲಾಖೆ, ಪಂಚಾಯಿತಿ ಸಿಬ್ಬಂದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮನೆಗಳ ಶೀಘ್ರ ಹಸ್ತಾಂತರ:
ತಿರುವನಂತಪುರ ಕೇಂದ್ರೀಕರಿಸಿ ಚಟುವಟಿಕೆ ನಡೆಸುತ್ತಿರುವ ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ದಾನಿಗಳ ಸಹಕಾರದೊಂದಿಗೆ ನಿರ್ಮಿಸಿರುವ ಸಾಯಿಗ್ರಾಮದಲ್ಲಿ ಮನೆಗಳ ಕೆಲಸ ಪೂರ್ತಿಗೊಂಡಿದ್ದರೂ, ಮೂಲಸೌಕರ್ಯ ಕೊರತೆಯಿಂದ ಮನೆಗಳ ಕೀಲಿಕೈ ಹಸ್ತಾಂತರ ವಿಳಂಬವಾಗಿದೆ. ರಸ್ತೆ, ವಿದ್ಯುತ್, ಕುಡಿಯುವ ನೀರು ವಿತರಣೆಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ತಿಗೊಂಡಿದೆ. ಎಲ್ಲರನ್ನು ಒಟ್ಟುಸೇರಿಸಿಕೊಂಡು ನಡೆಸುತ್ತಿರುವ ಶುಚೀಕರಣಕಾರ್ಯ ಶ್ಲಾಘನೀಯ. ಸಾಯಿಗ್ರಾಮದಲ್ಲಿ ಶುಚೀಕರಣಕಾರ್ಯ ಪೂರ್ತಿಗೊಳ್ಳುತ್ತಿದ್ದಂತೆ ಮೂಲಸೌಕರ್ಯ ಕಾಮಗಾರಿಗಳೂ ಆರಂಭಗೊಳ್ಳಲಿದೆ. ಆರು ತಿಂಗಳ ಒಳಗೆ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‍ರಣವೀರ್‍ಚಂದ್ ತಿಳಿಸಿದ್ದಾರೆ.