ತಿರುವನಂತಪುರ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಲೇಖಕ ಸಿವಿಕ್ ಚಂದ್ರನ್‌ಗೆ ನೀಡಿದ ನಿರೀಕ್ಷಣಾ ಜಾಮೀನನ್ನು ಕೇರಳ ಉಚ್ಚ ನ್ಯಾಯಾಲಯ(High Court) ಗುರುವಾರ ರದ್ದುಪಡಿಸಿದೆ.
ಕೋಝಿಕ್ಕೋಡ್‌ನ ಸೆಷನ್ಸ್ ನ್ಯಾಯಾಲಯ ಚಂದ್ರನ್ ಅವರಿಗೆ ನೀಡಿದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ದೂರುದಾರರು ಹಾಗೂ ಕೇರಳ ಸರಕಾರ ಸಲ್ಲಿಸಿದ ಮನವಿಯನ್ನು ನ್ಯಾಯಮೂರ್ತಿ ಎ.
ಬದ್ರುದ್ದೀನ್ ಅವರು ವಿಚಾರಣೆ ನಡೆಸಿ ಈ ಆದೇಶ ನೀಡಿದರು.
ಸೆಷನ್ಸ್ ನ್ಯಾಯಾಲಯದ ಆದೇಶ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಗೆ ವಿರುದ್ಧವಾಗಿದೆ ಎಂದು ದೂರುದಾರರು ವಾದಿಸಿದ್ದರು.
ಮಹಿಳೆ ಲೈಂಗಿಕ ಪ್ರಚೋದನಕಾರಿ ಉಡುಪು ಧರಿಸಿದ್ದರೆ, ಆಕೆಯ ಗೌರವಕ್ಕೆ ಧಕ್ಕೆ ತರುವ ಕುರಿತ ಕಾನೂನು ಅನ್ವಯವಾಗುವುದಿಲ್ಲ ಎಂದು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್. ಕೃಷ್ಣ ಕುಮಾರ್ ನೀಡಿದ ಹೇಳಿಕೆಯನ್ನು ಕೇರಳ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠ ಕಳೆದ ವಾರ ರದ್ದುಪಡಿಸಿತ್ತು.
ಆದರೆ, ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿರುವುದನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು.
ತನಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಲಾಗಿದೆ ಎಂದು ದಲಿತ ಮಹಿಳಾ ಲೇಖಕಿಯೋರ್ವಳು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಚಂದ್ರನ್ ಅವರಿಗೆ ಸೆಷನ್ಸ್ ನ್ಯಾಯಾಲಯ ಆಗಸ್ಟ್ 2ರಂದು ನಿರೀಕ್ಷಣಾ ಜಾಮೀನು ನೀಡಿತ್ತು.
ಸಿವಿಕ್ ಚಂದ್ರನ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.