ಶ್ರೀನಗರ: ಈ ವಾರದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಉಗ್ರರೊಂದಿಗಿನ ಎನ್‌ಕೌಂಟರ್‌ನಲ್ಲಿ ಗುಂಡೇಟಿನಿಂದ ಗಾಯಗೊಂಡು ಗುರುವಾರ ಸಾವನ್ನಪ್ಪಿದ ತನ್ನ ಭಾರತೀಯ ಸೇನಾಪಡೆಯ ಶ್ವಾನದಳದ ಯೋಧ 'ಜೂಮ್'ಗೆ ಶುಕ್ರವಾರ ಸೇನೆಯು ಗೌರವಾನ್ವಿತ ಅಂತಿಮ ಗೌರವ ಸಲ್ಲಿಸಿತು.
ಇಲ್ಲಿನ ಬಾದಾಮಿ ಬಾಗ್ ಕಂಟೋನ್ಮೆಂಟ್‌ನ ಚಿನಾರ್ ವಾರ್ ಸ್ಮಾರಕದಲ್ಲಿ ನಡೆದ ಅಂತಿಮನಮನ ಕಾರ್ಯಕ್ರಮದಲ್ಲಿ ಚಿನಾರ್ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಎಡಿಎಸ್ ಔಜ್ಲಾ ಮತ್ತು ಎಲ್ಲಾ ಶ್ರೇಣಿಗಳ ಸೈನಿಕರು ಶ್ವಾನದಳದ ಧೀರ ಯೋಧ 'ಝೂಮ್'ಗೆ ಅಂತಿಮ ನಮನ ಸಲ್ಲಿಸಿದರು ಎಂದು ಶ್ರೀನಗರ ಮೂಲದ ಪ್ರೊ ಡಿಫೆನ್ಸ್ ಕರ್ನಲ್ ಎಮ್ರಾನ್ ಮುಸಾವಿ ತಿಳಿಸಿದ್ದಾರೆ.
ಅನಂತನಾಗ್‌ನ ಟ್ಯಾಂಗ್‌ಪಾವ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕರ ನಿಖರವಾದ ಸ್ಥಳವನ್ನು ಗುರುತಿಸುವಲ್ಲಿ ಮಾತ್ರವಲ್ಲದೆ ಒಬ್ಬ ಭಯೋತ್ಪಾದಕನನ್ನು ನಿಷ್ಕ್ರಿಯಗೊಳಿಸುವಲ್ಲಿಯೂ ಸೇನಾ ಶ್ವಾನ ಝೂಮ್ ಪ್ರಮುಖ ಪಾತ್ರ ವಹಿಸಿತ್ತು ಎಂದು ಅವರು ಹೇಳಿದರು.
ಆದಾಗ್ಯೂ, ಈ ಪ್ರಕ್ರಿಯೆಯಲ್ಲಿ ಝೂಮ್ ನಾಯಿಗೆ ಎರಡು ಗುಂಡೇಟುಗಳು ಬಿದ್ದಿತು. ಗಾಯಗೊಂಡಿದ್ದರೂ, ಝೂಮ್ ಘಟನಾ ಪ್ರದೇಶದಲ್ಲಿ ಅಡಗಿದ್ದ ಇತರ ಭಯೋತ್ಪಾದಕನನ್ನು ಪತ್ತೆಹಚ್ಚಿತ್ತು. ಗುರಿ ಪ್ರದೇಶದಿಂದ ಹಿಂತಿರುಗಿ ತೀವ್ರ ರಕ್ತದ ಸ್ರಾವದಿಂದಾಗಿ ಮೂರ್ಛೆ ಹೋಗಿತ್ತು. ಕೂಡಲೇ ಅದನ್ನು ಸೇನಾಸ್ಪತ್ರೆಗೆ ದಾಖಲಿಸಲಾಯಿತು.
ತಕ್ಷಣವೇ ಶ್ರೀನಗರದ ಸೇನಾ ಪಶುವೈದ್ಯಕೀಯ ಆಸ್ಪತ್ರೆಗೆ ಝೂಮ್ ಅನ್ನು ಸ್ಥಳಾಂತರಿಸಲಾಯಿತು. ಆದರೆ ಗುರುವಾರ ಬೆಳಗ್ಗೆ 11.50ಕ್ಕೆ ಝೂಮ್ ಕೊನೆಯುಸಿರೆಳೆಯಿತು. ಝೂಮ್ ಚಿನಾರ್ ವಾರಿಯರ್ಸ್‌ನ ಅಮೂಲ್ಯ ಸದಸ್ಯನಾಗಿತ್ತು ಎಂದು ಭಾರತೀಯ ಸೇನಾ ಮಾಧ್ಯಮ ಸಂವಹನಾಧಿಕಾರಿ ಹೇಳಿದರು.
ಎರಡು ವರ್ಷ ವಯಸ್ಸಿನ ಝೂಮ್ ತನ್ನ ಚಿಕ್ಕ ವಯಸ್ಸಿನ ಹೊರತಾಗಿಯೂ ಬಹು ಭಯೋತ್ಪಾದನಾ ಕಾರ್ಯಾಚರಣೆಗಳಲ್ಲಿ ಪರಿಣತನಾಗಿದ್ದನು, ಅಲ್ಲಿ ಅವನು ತನ್ನ ಶಕ್ತಿ ಮತ್ತು ಧೈರ್ಯದಿಂದ ತನ್ನನ್ನು ತಾನು ಗುರುತಿಸಿಕೊಂಡಿದ್ದನು. ಜೂಮ್ ನ ಸಾವಿನ ಮೂಲಕ ಚಿನಾರ್ ಕಾರ್ಪ್ಸ್ ತಂಡ ತಂಡದ ಧೀರ ಸದಸ್ಯನನ್ನು ಕಳೆದುಕೊಂಡಿದೆ. ಝೂಮ್ ಸಾಹಸ ಎಲ್ಲಾ ಶ್ರೇಣಿಗಳ ಸೈನಿಕರನ್ನು ಪ್ರೇರೇಪಿಸುತ್ತದೆ ಎಂದು ಕರ್ನಲ್ ಮುಸಾವಿ ಹೇಳಿದರು.