ಕುಂಬಳೆ: ಸೌರಮಂಡಲದ ರಾಜನಾದ ಸೂರ್ಯನು ಕನ್ಯಾರಾಶಿಯಿಂದ ತುಲಾ ರಾಶಿಯನ್ನು ಪ್ರವೇಶಿಸುವ ದಿನವೇ ತುಲಾ ಸಂಕ್ರಮಣ. ಈ ಬಾರಿ ಅಕ್ಟೋಬರ್ 17 ರಂದು(ನಾಳೆ) ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ವರ್ಷಕ್ಕೊಂದು ಬಾರಿ ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುವ ದಿನವನ್ನು ತುಲಾ ಸಂಕ್ರಮಣ ಎಂದು ಕರೆಯುತ್ತಾರೆ. ಈ ದಿನವೇ ಕಾವೇರಿಯು ತನ್ನ ಉಗಮಸ್ಥಾನದಲ್ಲಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನವನ್ನು ನೀಡುತ್ತಾಳೆ. ಹಾಗಾಗಿ ಈ ದಿನವನ್ನು ಕಾವೇರಿ ಸಂಕ್ರಮಣ, ಕಾವೇರಿ ಸಂಕ್ರಾಂತಿಯೆಂದೂ ಕರೆಯುತ್ತಾರೆ.
ಕಾವೇರಿ ಉಗಮಸ್ಥಾನವಾದ ತಲಕಾವೇರಿಗೆ ಸಂವಾದಿಯಾಗಿ ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ಮುಜುಂಗಾವು ಶ್ರೀಪಾರ್ಥಸಾರಥಿ ಶ್ರೀಕೃಷ್ಣ ದೇವಾಲಯದಲ್ಲೂ ಸಹಸ್ರಾರು ಜನರು ತೀರ್ಥಸ್ನಾನ ಮಾಡುವುದು ತಲತಲಾಂತರದಿಂದ ಬಂದಿರುವ ನಂಬಿಕೆಯಾಗಿದೆ. ಸಂಕ್ರಮಣದ ಪ್ರಯುಕ್ತ ಮುಜುಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದ ಕೊಳದಲ್ಲಿ ವಾಡಿಕೆಯಂತೆ ನಾಳೆ ಸಹಸ್ರಾರು ಭಕ್ತರು ಶ್ರದ್ಧಾ ಭಕ್ತಿಯಿಂದ ತೀರ್ಥಸ್ನಾನ ಮಾಡುವರು. ಕುಂಬಳೆ ಸೀಮೆಯಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ದೇವಾಲಯಗಳಲ್ಲಿ ಮುಜುಂಗಾವು ಒಂದು. ಇಲ್ಲಿ ಕಾವೇರಿ ಸಂಕ್ರಮದ ಆಚರಣೆ ವಿಶಿಷ್ಟ ಮತ್ತು ಹೆಸರುವಾಸಿ. ಇಲ್ಲಿಯ ಸರೋವರದ ನೀರು ಸಲಿಲಕಾವೇರಿ ತೀರ್ಥಕ್ಕೆ ಸಮವೆಂದೂ, ಬೆಳ್ತಿಗೆ ಅಕ್ಕಿ, ಹುರುಳಿಗಳನ್ನು ಸಮರ್ಪಿಸಿ ಕೊಳದಲ್ಲಿ ಸ್ನಾನ ಮಾಡುವುದರಿಂದ ಹಲವು ರೀತಿಯ ಚರ್ಮರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಹಿಂದೆ ಕೇವಲ ಸೀಮೆಯ ಜನರಿಗμÉ್ಟೀ ಇದರ ವಿಶಿಷ್ಟತೆ ತಿಳಿದಿತ್ತು. ಇತ್ತೀಚೆಗೆ ಸ್ಥಳೀಯ ಹಾಗೂ ಹೊರಗಿನಿಂದ ಜಾತಿ ಬೇಧ ಮರೆತು ಪವಿತ್ರ ಸ್ನಾನದಲ್ಲಿ ಜನರು ಪಾಲ್ಗೊಳ್ಳುತ್ತಾರೆ.
ಸಂಪ್ರದಾಯದಂತೆ ಬೆಳಗ್ಗೆ 4 ಗಂಟೆಗೆ ಕ್ಷೇತ್ರದ ಅರ್ಚಕರು ಬೆಳ್ಳಿಯ ಕಲಶದಲ್ಲಿ ಕೆರೆಯಿಂದ ತೀರ್ಥವನ್ನು ವಾದ್ಯಘೋಷಗಳ ಮೆರವಣಿಗೆಯಲ್ಲಿ ತಂದು ಶ್ರೀದೇವರಿಗೆ ಅಭಿμÉೀಕ ಮಾಡುವರು. ಬಳಿಕ ಸಾರ್ವಜನಿಕರಿಗೆ ತೀರ್ಥ ಸ್ನಾನಕ್ಕೆ ಅವಕಾಶ ನೀಡಲಾಗುತ್ತದೆ. ಅಕ್ಕಿ, ಹುರುಳಿಗಳನ್ನು ಸಮರ್ಪಿಸಿ ಕೊಳಕ್ಕೆ ಪ್ರದಕ್ಷಿಣೆ ಬಂದು ಉಳಿದ ಸ್ವಲ್ವ ಹುರುಳಿ ಮತ್ತು ಅಕ್ಕಿಯ ಮಿಶ್ರಣವನ್ನು ಶ್ರೀ ಕ್ಷೇತ್ರದ ಗೋಪುರದಲ್ಲಿ ಇಡಲಾಗಿರುವ ಕೊಪ್ಪರಿಗೆಗೆ ಹಾಕಿ ದೇವರಿಗೆ ಮುಳ್ಳು ಸೌತೆ ಮತ್ತು ಹಣ್ಣು ಕಾಯಿಗಳನ್ನು ಸಮರ್ಪಿಸಿ ತೀರ್ಥಪ್ರಸಾದ ವಿತಸುವುದರೊಂದಿಗೆ ಹರಕೆ ಸಂದಾಯವಾಗುತ್ತದೆ.
ತೀರ್ಥಸ್ನಾನದಲ್ಲಿ ಸಂಜೆಯ ತನಕವೂ ಭಕ್ತರು ಭಾಗವಹಿಸುತ್ತಾರೆ.
ಶ್ರೀ ಕ್ಷೇತ್ರದಲ್ಲಿ ನಡೆಯುವ ತುಲಾಸಂಕ್ರಮಣ ತೀರ್ಥ ಸ್ನಾನದ ಅಂಗವಾಗಿ ಕಳೆದ ವರ್ಷಗಳಿಂದ ಕುಂಬಳೆ-ಮುಳ್ಳೇರಿಯಾ ರಸ್ತೆಯಾಗಿ ಸಂಚರಿಸುವ ಹಾಗೂ ಕುಂಬಳೆ-ಪೆರ್ಲ ಸಂಚರಿಸುವ ಖಾಸಗಿ ಬಸ್‍ಗಳು ಶ್ರೀ ಕ್ಷೇತ್ರದ ಮುಂಭಾಗವಾಗಿ ಸಂಚಾರ ನಡೆಸುತ್ತವೆ.