ನವದೆಹಲಿ: 'ಭಯೋತ್ಪಾದನೆಯು ಮಾನವ ಹಕ್ಕುಗಳ ಬಹುದೊಡ್ಡ ಉಲ್ಲಂಘನೆಯಾಗಿದೆ. ಆದ್ದರಿಂದ ಇಂಟರ್‌ಪೋಲ್ ಮತ್ತು ಅದರ ಸದಸ್ಯ ರಾಷ್ಟ್ರಗಳು, ಗಡಿಗಳನ್ನು ಮೀರಿ ಬೆಳೆದಿರುವ ಭಯೋತ್ಪಾನೆಯನ್ನು ಮಣಿಸಲು ಕೈಜೋಡಿಸಬೇಕು' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಕರೆ ನೀಡಿದರು.
90ನೇ ಇಂಟರ್‌ಪೋಲ್ ಸಾಮಾನ್ಯ ಸಭೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಉಗ್ರ ಸಂಘಟನೆಗಳು ಗಡಿಗಳನ್ನು ಮೀರಿ ಒಂದು ಸಿಂಡಿಕೇಟ್‌ನಂತೆ ಕೆಲಸ ಮಾಡುತ್ತಿವೆ. ಆದ್ದರಿಂದ ಇಂಟರ್‌ಪೋಲ್ ಮತ್ತು ಗುಪ್ತಚರ ಏಜೆನ್ಸಿಗಳು ಒಟ್ಟಿಗೆ ಕೆಲಸ ಮಾಡಬೇಕು' ಎಂದರು.
'ಎಲ್ಲಾ ಸವಾಲುಗಳನ್ನು ಎದುರಿಸಲು ಸಶಸ್ತವಾಗುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರವು ಪೊಲೀಸ್ ಪಡೆಯನ್ನು ತಯಾರು ಮಾಡುತ್ತಿದೆ. ಜೊತೆಗೆ ಭಯೋತ್ಪಾದನೆ ಹಾಗೂ ಮಾದಕವಸ್ತುಗಳಿಗೆ ಸಂಬಂಧಿಸಿ ರಾಷ್ಟ್ರೀಯ ದತ್ತಾಂಶ ಕೋಶವನ್ನೂ ಭಾರತ ತಯಾರು ಮಾಡುತ್ತಿದೆ' ಎಂದರು.