ನವದೆಹಲಿ: ರಾಜ್ಯದ ಸೇವಾನಿರತ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣದ ಸ್ನಾತಕೋತ್ತರ ಪದವಿ ಪ್ರವೇಶಾತಿಯಲ್ಲಿ ಶೇ 20ರಷ್ಟು ಮೀಸಲಾತಿ ಕಲ್ಪಿಸಿರುವ ಮಹಾರಾಷ್ಟ್ರ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
'ಶೈಕ್ಷಣಿಕ ವರ್ಷದ ಮಧ್ಯಂತರದಲ್ಲಿ ನಿಯಮಾವಳಿಯಲ್ಲಿ ಬದಲಾವಣೆ ಮಾಡಿರುವುದರಿಂದಾಗಿ ಮಹಾರಾಷ್ಟ್ರ ಸರ್ಕಾರದ ಆದೇಶವು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವುದಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
ಅವರ ವಾದವನ್ನು ಒಪ್ಪುವುದು ಕಷ್ಟ' ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಗುರುವಾರ ಹೇಳಿದೆ.
'ಮಹಾರಾಷ್ಟ್ರ ಸರ್ಕಾರವು ಶೈಕ್ಷಣಿಕ ವರ್ಷದ ಮಧ್ಯಂತರದಲ್ಲಿ ಮೀಸಲು ಆದೇಶವನ್ನು ಜಾರಿಗೊಳಿಸಿದೆ. ಇದು ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ವಿರುದ್ಧವಾಗಿದೆ' ಎಂದು ಅರ್ಜಿದಾರರ ಪರ ವಕೀಲ ಆನಂದ್ ಗ್ರೋವರ್ ನ್ಯಾಯಪೀಠಕ್ಕೆ ತಿಳಿಸಿದರು.
'ಸಂವಿಧಾನ ಪೀಠದ ತೀರ್ಪಿನ ಬಳಿಕ ಸೇವಾನಿರತ ಅಧಿಕಾರಿಗಳಿಗೆ ಮೀಸಲಾತಿ ಕಲ್ಪಿಸುವ ಆದೇಶವನ್ನು ಮರಳಿ ಜಾರಿಗೊಳಿಸಲಾಗಿದೆ' ಎಂದು ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಸಿದ್ದಾರ್ಥ್ ಅಭಯ್ ಧರ್ಮಾಧಿಕಾರಿ ಹೇಳಿದರು.