ನವದೆಹಲಿ: 1991ರ ಪೂಜಾಸ್ಥಳಗಳ (ವಿಶೇಷ ಅವಕಾಶಗಳು) ಕಾಯ್ದೆಯಲ್ಲಿನ ಕೆಲ ನಿಬಂಧನೆಗಳ ಸಿಂಧುತ್ವವನ್ನು ಪ್ರಶ್ನಿಸಿದ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಅಕ್ಟೋಬರ್ 31ರ ಒಳಗಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿತು.
ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್, ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಹಾಗೂ ಎಸ್.ಆರ್.ಭಟ್ ಅವರಿದ್ದ ನ್ಯಾಯಪೀಠ ಅರ್ಜಿಗಳ ವಿಚಾರಣೆ ನಡೆಸಿತು.
'ಈ ಕಾಯ್ದೆಯಲ್ಲಿನ ಕೆಲ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಈ ವರೆಗೆ ತನ್ನ ಪ್ರತಿಕ್ರಿಯೆ ಸಲ್ಲಿಸಿಲ್ಲ' ಎಂದು ಸಿಜೆಐ ಲಲಿತ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 'ಈ ವಿಷಯಕ್ಕೆ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂಬುದರ ಬಗ್ಗೆ ಪರಿಶೀಲಿಸಲಾಗುತ್ತಿದೆ' ಎಂದರು.
'ನನಗಿರುವ ಸೂಚನೆಯಂತೆ, ಪ್ರತಿಕ್ರಿಯೆ ಸಲ್ಲಿಸಲು ಎರಡು ವಾರಗಳ ಸಮಯ ಅಗತ್ಯ ಇದೆ. ಆದರೆ, ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿದರೆ, ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚು ಸಮಯ ಬೇಕಾಗುತ್ತದೆ' ಎಂದೂ ಮೆಹ್ತಾ ಹೇಳಿದರು.