ನವದೆಹಲಿ: ಅವಧಿಗೆ ಮುನ್ನವೇ ಬಿಡುಗಡೆ ಮಾಡಬೇಕೆಂದು ಕೋರಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕರು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಬೆಂಬಲಿಸಿದೆ.
'ನಾವು 30 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದೇವೆ ಮತ್ತು ರಾಜೀವ್ ಗಾಂಧಿ ಹತ್ಯೆಯ ಎಲ್ಲಾ ಏಳು ದೋಷಿಗಳ ಶಿಕ್ಷೆಯ ಅವಧಿಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರವು ನಾಲ್ಕು ವರ್ಷಗಳ ಹಿಂದೆಯೇ ಒಪ್ಪಿಕೊಂಡಿತ್ತು' ಎಂದು ದೋಷಿಗಳಾದ ಎಸ್.
ನಳಿನಿ ಮತ್ತು ಆರ್.ಪಿ. ರವಿಚಂದ್ರನ್ ಅರ್ಜಿಗಳಲ್ಲಿ ಉಲ್ಲೇಖಿಸಿದ್ದಾರೆ.
ದೋಷಿಗಳ ಶಿಕ್ಷಾವಧಿ ತಗ್ಗಿಸುವಂತೆ 2018ರ ಸೆಪ್ಟೆಂಬರ್‌ನಲ್ಲೇ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತು. ಆದರೆ ರಾಜ್ಯಪಾಲರು ಈ ಕುರಿತು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ. ಶಿಫಾರಸಿಗೆ ಸಂಬಂಧಿಸಿದ ಕಡತಗಳನ್ನು ಅವರು 2021ರ ಜನವರಿ 27ರಂದು ರಾಷ್ಟ್ರಪತಿಗಳಿಗೆ ವರ್ಗಾಯಿಸಿದರು. ಇಲ್ಲಿಯವರೆಗೆ ಈ ಶಿಫಾರಸಿನ ಕುರಿತು ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ದೋಷಿ ಪೆರಾರಿವಾಲನ್‌ನನ್ನು ಬಿಡುಗೊಳಿಸುವಂತೆ ಮೇನಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಆದೇಶವನ್ನು ನಳಿನಿ ಮತ್ತು ರವಿಚಂದ್ರನ್ ತಮ್ಮ ಅರ್ಜಿಗಳಲ್ಲಿ ಉಲ್ಲೇಖಿಸಿದ್ದಾರೆ.