ನವದೆಹಲಿ: ಕಳೆದ ವರ್ಷದ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯ ಟಿಕುನಿಯಾ ಗ್ರಾಮದಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ಒಂದು ವರ್ಷ ಪೂರ್ಣಗೊಂಡಿದ್ದು, ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ಧ ಸೋಮವಾರ ಕಿಡಿಕಾರಿವೆ.
ಉತ್ತರ ಪ್ರದೇಶದ ಆಗಿನ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ಮಿಶ್ರಾ ಕಾರು ಚಲಾಯಿಸಿದ್ದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ಪತ್ರಕರ್ತ ಸೇರಿ ನಾಲ್ವರು ಅಸುನೀಗಿದ್ದರು.
'ಕೇಂದ್ರವು ಜಾರಿಗೊಳಿಸಲು ಮುಂದಾಗಿದ್ದ ಕೃಷಿ ಮಸೂದೆಗಳ ವಿರುದ್ಧ ಧರಣಿ ನಡೆಸುತ್ತಿದ್ದವರ ಮೇಲೆ ಕಾರು ಹರಿಸಿ ನಾಲ್ವರನ್ನು ಹತ್ಯೆ ಮಾಡಿದ್ದು ದುರದೃಷ್ಟಕರ. ಇದು ರೈತರಿಗೆ ಮಾಡಿದ ಅವಮಾನ. ಪ್ರಕರಣದ ಆರೋಪಿ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಲ್ಲಿ ಉಳಿಸಿಕೊಂಡಿರುವುದು ದುರ್ದೈವದ ಸಂಗತಿ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಸಿಂಗ್, 'ಲಖೀಂಪುರ ಖೇರಿ ಹತ್ಯಾಕಾಂಡವು ಮರೆಯಲು ಸಾಧ್ಯವಾಗದಂತಹದ್ದು' ಎಂದಿದ್ದಾರೆ. 'ದೇಶದ ರೈತರು ಆ ಘಟನೆಯನ್ನು ಎಂದಿಗೂ ಮರೆಯುವುದಿಲ್ಲ. ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಲು ಸರ್ಕಾರ ವಿಳಂಬ ಮಾಡುತ್ತಿದೆ' ಎಂದು ಭಾರತೀಯ ಕಿಸಾನ್ ಯೂನಿಯನ್‌ನ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.
'ಉತ್ತರ ಪ್ರದೇಶ ಸರ್ಕಾರಕ್ಕೆ ಕಾನೂನು ವ್ಯವಸ್ಥೆ ಅಥವಾ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಸರ್ಕಾರವು ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ' ಎಂದು ದೂರಿದ್ದಾರೆ.