ನವದೆಹಲಿ: ವಿದ್ಯುನ್ಮಾನ ಮತಯಂತ್ರ (ಇವಿಎಂ) ಮತ್ತು ಮತ ಪತ್ರಗಳಲ್ಲಿ (ಬ್ಯಾಲೆಟ್) ಪಕ್ಷದ ಚಿಹ್ನೆಗಳ ಬದಲು ಅಭ್ಯರ್ಥಿಗಳ ವಯಸ್ಸು, ಶೈಕ್ಷಣಿಕ ಅರ್ಹತೆ ಮತ್ತು ಭಾವಚಿತ್ರವನ್ನು ಅಳವಡಿಸುವ ಕುರಿತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಅ.31) ಕೈಗೆತ್ತಿಕೊಳ್ಳಲಿದೆ.
ಇಂತಹ ಕ್ರಮವು ಚುನಾವಣೆಯಲ್ಲಿ ಮತದಾರರು ಬುದ್ಧಿವಂತ ಮತ್ತು ಪ್ರಾಮಾಣಿಕ ಅಭ್ಯರ್ಥಿಯ ಪರ ಮತಚಲಾಯಿಸಲು ಹಾಗೂ ಟಿಕೆಟ್ ಹಂಚುವಲ್ಲಿ ಪಕ್ಷದ ಮುಖ್ಯಸ್ಥರ ಸರ್ವಾಧಿಕಾರವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದೂ ಅರ್ಜಿಯಲ್ಲಿ ಹೇಳಲಾಗಿದೆ.
ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ನಮೂದಿಸಿರುವ ಪ್ರಕಾರ, ಈ ಅರ್ಜಿಯು ಮುಖ್ಯ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್.ಆರ್. ಭಟ್, ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಇವಿಎಂನಲ್ಲಿ ಪಕ್ಷದ ಚಿಹ್ನೆ ಬಳಸುವುದು ಅಸಾಂವಿಧಾನಿಕ. ಇದು ಸಂವಿಧಾನದ ಉಲ್ಲಂಘನೆ ಎಂದು ಘೋಷಿಸಬೇಕು ಎಂದು ವಕೀಲರಾದ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಕೋರಲಾಗಿದೆ.