ನವದೆಹಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ವಜಾಗೊಳಿಸುವಂತೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಈ ಕುರಿತು ಸುಪ್ರೀಂಕೋರ್ಟ್‌ಗೆ ಲಿಖಿತ ಉತ್ತರ ನೀಡಿರುವ ಕೇಂದ್ರ ಸರ್ಕಾರ, 'ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕೇ, ಬೇಡವೇ ಎಂಬುದು ನೀತಿ ನಿರೂಪಣೆಗೆ ಸಂಬಂಧಿಸಿದ್ದು. ಈ ವಿಷಯದಲ್ಲಿ ಸಂಸತ್‌ಗೆ ಕೋರ್ಟ್ ಯಾವುದೇ ನಿರ್ದೇಶನ ನೀಡುವಂತಿಲ್ಲ' ಎಂದು ತಿಳಿಸಿದೆ.
'ನಾಗರಿಕರು ಬೇರೆ ಬೇರೆ ಕಾನೂನುಗಳನ್ನು ಪಾಲನೆ ಮಾಡುವುದು, ದೇಶದ ಏಕತೆಗೆ ಅಗೌರವ ತೋರಿದಂತೆ' ಎಂದೂ ಕೇಂದ್ರ ಹೇಳಿದೆ.
'ಕಾನೂನು ರಚಿಸುವುದು ಸಂಸತ್‌ನ ಪರಮಾಧಿಕಾರ. ಈ ಅಂಶವನ್ನು ಸುಪ್ರೀಂಕೋರ್ಟ್ ನೀಡಿರುವ ಹಲವಾರು ತೀರ್ಪುಗಳಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಈ ವಿಷಯ ಕುರಿತು ಕಾನೂನು ಆಯೋಗವು ವರದಿಯೊಂದನ್ನು ಸಲ್ಲಿಸಲಿದೆ. ವರದಿಯನ್ನು ಪರಿಶೀಲಿಸಿದ ನಂತರ, ಸರ್ಕಾರ ಕ್ರಮ ಕೈಗೊಳ್ಳುವುದು' ಎಂದು ಕೇಂದ್ರ ಸರ್ಕಾರ ಹೇಳಿದೆ.
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವಂತೆ ಕೋರಿ ವಕೀಲ ಹಾಗೂ ಬಿಜೆಪಿ ಮುಖಂಡ ಅಶ್ವಿನಿಕುಮಾರ್ ಅವರು ಪಿಐಎಲ್ ಸಲ್ಲಿಸಿದ್ದಾರೆ.