ಕೋಳಿಕ್ಕೋಡ್: ದೇವಸ್ಥಾನದ ಅರ್ಚಕರೊಬ್ಬರು ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕೇರಳದ ಕೊಯಿಲಾಂಡಿ ಎಂಬಲ್ಲಿ ನಡೆದಿದೆ.
ಅಕ್ಟೋಬರ್ 7ರಂದು 28 ವರ್ಷದ ಜಿಷ್ಣು ನಂಬೂದಿರಿ ಎಂಬುವವರನ್ನು ಕೊಯಿಲಾಂಡಿ ಜಂಕ್ಷನ್‌ನಲ್ಲಿ ಸ್ಥಳೀಯ ರಿಕ್ಷಾ ಚಾಲಕರು ಹಿಡಿದು ಬಂಧಿಸಿದ್ದರು ಎಂದು ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ.
ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಬಂಧಿತ ವ್ಯಕ್ತಿಯ ವಿರುದ್ಧ ಯಾವುದೇ ಅಪರಾಧ ಎಸಗಿರುವ ಬಗ್ಗೆ ದೂರುಗಳು ಬಂದಿಲ್ಲ. ಹಾಗಾಗಿ ಸಂಬಂಧಿಕರ ಜೊತೆ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಂಧಿತ ವ್ಯಕ್ತಿ ಮೆಪ್ಪಾಯುರ್ ಸಮೀಪದ ದೇವಸ್ಥಾನದಲ್ಲಿ ಅರ್ಚಕ ಎಂದು ತಿಳಿದುಬಂದಿದೆ. ವಿಚಾರಣೆ ವೇಳೆ ಚಿಕನ್‌ಪಾಕ್ಸ್ ರೋಗವಿದ್ದುದರಿಂದ ಬುರ್ಖಾ ಧರಿಸಿದ್ದಾಗಿ ಕಾರಣ ನೀಡಿದ್ದಾರೆ. ಆದರೆ ಅವರ ಮೈಮೇಲೆ ಅಂತಹ ಯಾವುದೇ ಕುರುಹು ಇರಲಿಲ್ಲ. ಅವರ ಹೆಸರು, ವಿಳಾಸ ಮತ್ತಿತರ ಮಾಹಿತಿಯನ್ನು ದಾಖಲಿಸಿಕೊಂಡು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುರ್ಖಾ ಸಾಮಾನ್ಯವಾಗಿ ಮುಸ್ಲಿಂ ಮಹಿಳೆಯರು ಧರಿಸುವ, ಪೂರ್ತಿ ದೇಹವನ್ನು ಮುಚ್ಚುವ ಉಡುಗೆಯಾಗಿದೆ.