ಕಾಸರಗೋಡು: ಕ್ಲಿಷ್ಟಕರ ಹಾದಿಯಲ್ಲಿ ಮುನ್ನಡೆಯುತ್ತಿರುವ ತೃತೀಯ ಲಿಂಗಿಗಳ ಹಿಂದುಳಿದ ವರ್ಗದ ಹಕ್ಕುಗಳ ಹೋರಾಟದಲ್ಲಿ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ ಎಂದು ಲೋಕೋಪಯೋಗಿ ಪ್ರವಾಸೋದ್ಯಮ ಯುವಜನ ಖಾತೆ ಸಚಿವ ಪಿ.ಎ.ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ.
ಅವರು ತೃತೀಯಲಿಂಗಿಗಳ ಸಬಲೀಕರಣ ಯೋಜನೆಯ ಅಂಗಗವಾಗಿ ರಚಿಸಲಾದ ಮಾರಿವಿಲ್ ಕ್ಲಬ್ ತಚ್ಚಂಗಾಡ್ ವತಿಯಿಂದ ಬಿ.ಆರ್.ಡಿ.ಸಿ. ಬೇಕಲ್ ಸಾಂಸ್ಕøತಿಕ ಕೇಂದ್ರದಲ್ಲಿ ಆರಂಭಗೊಂಡ ಮೂರು ದಿನಗಳ ರಾಜ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತಲಪಿಸುವ ಉದ್ದೇಶದಿಂದ ಸಾಮಾಜಿಕ ವಾಗಿಯೂ ಆರ್ಥಿಕವಾಗಿಯೂ ಸಾಂಸ್ಕೃತಿಕವಾಗಿಯೂ ಇವರನ್ನು ಉನ್ನತಿಗೇರಿಸುವುದರ ಜತೆಗೆ ಇತರ ನೆರವು ನೀಡುವುದು ಸರ್ಕಾರದ ಉದ್ದೇಶವಾಗಿದೆ. ಕೇರಳ ರಾಜ್ಯ ಯುವಜನ ಕಲ್ಯಾಣ ಮಂಡಳಿ ನಡೆಸುವ ಮೂರು ದಿನಗಳ ಶಿಬಿರ ಅವರಿಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.
ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರನ್, ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿ ಸದಸ್ಯರಾದ ಸಂತೋಷ್ ಕಲಾ, ಎಂ.ಪಿ.ಶೇನ್ ಮುಂತಾದವರು ಉಪಸ್ಥಿತರಿದ್ದರು.
ಕೇರಳ ರಾಜ್ಯ ಯುವ ಕಲ್ಯಾಣ ಮಂಡಳಿ, ಜಿಲ್ಲಾ ಯುವ ಕೇಂದ್ರ ಮತ್ತು ಮಾರಿವಿಲ್ ಕ್ಲಬ್ ಜಂಟಿಯಾಗಿ ಅಕ್ಟೋಬರ್ 10ರವರೆಗೆ ಶಿಬಿರವನ್ನು ಆಯೋಜಿಸುತ್ತಿವೆ.