ನವದೆಹಲಿ: 'ರಕ್ಷಣಾ ವಲಯದ ಉತ್ಪಾದನೆ ಉತ್ತೇಜಿಸಲು, ಫ್ರಾನ್ಸ್ ಭಾರತದ ಉತ್ತಮ ಪಾಲುದಾರನಾಗಲು ಬಯಸಿದೆ' ಎಂದು ಫ್ರಾನ್ಸ್‌ನ ರಾಯಭಾರಿ ಎಮ್ಯಾನ್ಯುಯೆಲ್ ಲೆನೈನ್ ಹೇಳಿದರು.
'ಎರಡೂ ಕಡೆ ಬೆಳೆಯುತ್ತಿರುವ ನಂಬಿಕೆಯಿಂದಾಗಿ ಅತ್ಯುತ್ತಮ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಹಂಚಿಕೊಳ್ಳಲು ಫ್ರಾನ್ಸ್ ನಿರ್ಧರಿಸಿದೆ.
ಫ್ರಾನ್ಸ್ ಮತ್ತು ಭಾರತೀಯ ಕಂಪನಿಗಳು ಭವಿಷ್ಯದ ಉಪಕರಣಗಳು, ವೇದಿಕೆಗಳಿಗಾಗಿ ಒಟ್ಟಿಗೆ ಕೆಲಸ ಮಾಡುತ್ತಿವೆ' ಎಂದು ಲೆನೈನ್ ಅವರು ನಿರ್ದಿಷ್ಟ ಮಾಹಿತಿಯನ್ನು ಬಹಿರಂಗಪಡಿಸದೇ ತಿಳಿಸಿದರು.
'ಯಾವುದೇ ದೇಶವು ಭಾರತಕ್ಕೆ ಇದೇ ಮಟ್ಟದ ತಂತ್ರಜ್ಞಾನವನ್ನು ಒದಗಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಭಾರತವು ತನ್ನ ಕಾರ್ಯತಂತ್ರದ ಸ್ವಾಯತ್ತತೆಯನ್ನು ಹೆಚ್ಚಿಸಲು ಮತ್ತು ಕೈಗಾರಿಕಾ ನೆಲೆಯನ್ನು ನಿರ್ಮಿಸಲು ಬಯಸುತ್ತದೆ ಎಂಬುದನ್ನು ನಾವು ಗುರುತಿಸಿದ್ದೇವೆ. ಆದ್ದರಿಂದ ನಾವು ಭಾರತದ ಅತ್ಯುತ್ತಮ ಪಾಲುದಾರರಾಗಲು ಬಯಸುತ್ತೇವೆ' ಎಂದು ಅವರು ಹೇಳಿದರು.
₹59,000 ಕೋಟಿಯ ರಫೇಲ್ ಯುದ್ಧ ವಿಮಾನಗಳ ಖರೀದಿಗಾಗಿ 2016ರ ಸೆಪ್ಟೆಂಬರ್‌ನಲ್ಲಿ ಭಾರತವು ಫ್ರಾನ್ಸ್‌ನೊಡನೆ ಇಂಡೊ-ಫ್ರೆಂಚ್ ಕಾರ್ಯತಂತ್ರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಹಲವು ಮಹತ್ವದ ಬೆಳವಣಿಗೆಗಳಾಗಿವೆ.
'ನಮ್ಮ ಸಹಕಾರದಲ್ಲಿ ರಕ್ಷಣಾ ವಲಯ ಎಂಬುದು ಯಾವಾಗಲೂ ಪ್ರಮುಖ ವಿಷಯವಾಗಿದೆ. ಏಕೆಂದರೆ ಉಭಯ ದೇಶಗಳ ಮಧ್ಯೆ ಅಷ್ಟು ಗಾಢ ನಂಬಿಕೆ ಇದೆ. ಇಂಥ ಪ್ರಕ್ರಿಯೆಗಳ ಮೇಲೆ ಕೆಲಸ ಮಾಡುವ ವೇಳೆ ನಂಬಿಕೆ ಇರಲೇಬೇಕಾಗುತ್ತದೆ. ಕಾರಣ ಈ ರೀತಿಯ ವಿದ್ಯಮಾನಗಳ ವಿಷಯದಲ್ಲಿ 10, 20, 30 ವರ್ಷಗಳವರೆಗೂ ಒಪ್ಪಂದ ಮಾಡಿಕೊಂಡಿರುತ್ತೇವೆ' ಎಂದೂ ಹೇಳಿದರು.