ಕೀವ್: ರಷ್ಯಾ ಸೋಮವಾರ ಉಕ್ರೇನ್‌ನ ಹಲವು ನಗರಗಳ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ರಾಜಧಾನಿ ಕೀವ್ ಸೇರಿದಂತೆ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಕೀವ್ ಮೇಲೆ ನಡೆಸಿರುವ ದಾಳಿಯಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ.
ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟಗೊಂಡ ನಂತರ ಭಯೋತ್ಪಾದನಾ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಉಕ್ರೇನ್ ಮೇಲೆ ದಾಳಿ ನಡೆಸಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಉಕ್ರೇನ್‌ನಲ್ಲಿನ ಪ್ರಮುಖ ಶಕ್ತಿ ಮತ್ತು ಮಿಲಿಟರಿ ಕಮಾಂಡ್ ಸೌಲಭ್ಯಗಳನ್ನು ಗುರಿಯಾಗಿಸಲು ರಷ್ಯಾದ ಮಿಲಿಟರಿ ಗಾಳಿ, ಸಮುದ್ರ ಮತ್ತು ನೆಲದಿಂದ ನಿಖರವಾದ ಶಸ್ತ್ರಾಸ್ತ್ರಗಳನ್ನು ಉಡಾಯಿಸಿತು. ರಷ್ಯಾದ ಮೇಲೆ ಉಕ್ರೇನ್ ತನ್ನ ಭಯೋತ್ಪಾದಕ ದಾಳಿಯನ್ನು ಮುಂದುವರೆಸಿದರೆ, ಮಾಸ್ಕೋದ ಪ್ರತಿಕ್ರಿಯೆಯು ಇನ್ನಷ್ಟು ಕಠಿಣವಾಗಿರುತ್ತದೆ ಎಂದು ಪುಟಿನ್ ಎಚ್ಚರಿಸಿದ್ದಾರೆ.
ರಷ್ಯಾ ಮತ್ತು ಕ್ರಿಮಿಯಾವನ್ನು ಸಂಪರ್ಕಿಸುವ ಸೇತುವೆ ಮೇಲೆ ಟ್ರಕ್ ಬಾಂಬ್ ಸ್ಫೋಟಗೊಂಡ ಪರಿಣಾಮ ಸೇತುವೆಯ ಭಾಗವೊಂದು ಕುಸಿದಿದ್ದು, ಮೂವರು ಮೃತಪಟ್ಟಿದ್ದಾರೆ. ದಕ್ಷಿಣ ಉಕ್ರೇನ್‌ನಲ್ಲಿ ಯುದ್ಧದಲ್ಲಿ ತೊಡಗಿಕೊಂಡಿರುವ ರಷ್ಯಾದ ಯೋಧರಿಗೆ ಸಾಮಗ್ರಿಗಳನ್ನು ತಲುಪಿಸುವ ಪ್ರಮುಖ ಮಾರ್ಗ ಇದಾಗಿತ್ತು. ಇದಾದ ಬಳಿಕ ಉಕ್ರೇನ್ ನಗರದ ಮೇಲೆ ರಷ್ಯಾ ದಾಳಿ ನಡೆಸಿದೆ.
ತಾನು ವಶಪಡಿಸಿಕೊಂಡಿದ್ದ ಪ್ರದೇಶವಾದ ರಷ್ಯಾಗೆ ಸಂಪರ್ಕ ಕಲ್ಪಿಸುವ ಕ್ರಿಮಿಯಾದ ಬೃಹತ್ ಸೇತುವೆಯ ಮೇಲೆ ನಡೆದ ಸ್ಫೋಟವನ್ನು ಉಕ್ರೇನ್ ವಿಶೇಷ ಪಡೆಗಳ ಮಾಸ್ಟರ್‌ಮೈಂಡ್ ಭಯೋತ್ಪಾದನಾ ಕೃತ್ಯ ಎಂದು ಪುಟಿನ್ ಶನಿವಾರ ಬಣ್ಣಿಸಿದ್ದರು. ಅದಾದ ಒಂದು ದಿನದ ನಂತರ ರಷ್ಯಾ ಉಕ್ರೇನ್ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕೀವ್‌ನಲ್ಲಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವಾಲಯದ ಸಲಹೆಗಾರ ರೋಸ್ಟಿಸ್ಲಾವ್ ಸ್ಮಿರ್ನೋವ್ ಹೇಳಿದ್ದಾರೆ.
ಪ್ರಮುಖ ನಗರಗಳ ಮೇಲೆ ನಿರಂತರವಾದ ದಾಳಿಯಿಂದಾಗಿ ವಸತಿ ಪ್ರದೇಶಗಳು ಮತ್ತು ನಿರ್ಣಾಯಕ ಮೂಲಸೌಕರ್ಯ ಸೌಲಭ್ಯಗಳು ಹಾನಿಗೊಳಲಾಗಿವೆ. ಇತ್ತೀಚಿನ ವಾರಗಳಲ್ಲಿ ರಷ್ಯಾದ ಪಡೆಯನ್ನು ಉಕ್ರೇನ್ ಪಡೆಗಳು ಸಮರ್ಥವಾಗಿ ಎದುರಿಸಿದ್ದು, ಇದೀಗ ಮತ್ತೆ ಯುದ್ಧ ಉಲ್ಬಣವಾಗಿದೆ.