ಈಗ ದಿನಕ್ಕೆ ಒಮ್ಮೆಯಾದರೂ ಸೋಷಿಯಲ್ ಮೀಡಿಯಾ ನೋಡದವರು ತುಂಬಾನೇ ಕಡಿಮೆ, ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ ಅಂದ್ರೆ ಸೋಷಿಯಲ್ ಮೀಡಿಯಾಗಳಲ್ಲಿ ಕನಿಷ್ಠ ಅರ್ಧ ಗಂಟೆಯದರೂ ಸಮಯ ಕಳೆದು ಹೋಗುತ್ತದೆ. ಆ ಸೋಷಿಯಲ್ ಮೀಡಿಯಾಗಳನ್ನು ಓಪನ್ ಮಾಡಿದರೆ ಸಾಕು ಸ್ಕ್ರಾಲ್ ಮಾಡುತ್ತಾ ಟೈಮ್ ಹೋಗುವುದೇ ಗೊತ್ತಾಗಲ್ಲ.
ಇನ್ನುಕೆಲವರು ದಿನಕ್ಕೆ ತಾಸುಗಟ್ಟಲೆ ಅದರಲ್ಲಿ ಕಳೆಯುವವರು ಇದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಗಂಟೆ-ಗಟ್ಟಲೆ ಸಮಯ ವ್ಯರ್ಥ ಮಾಡುವುದರಿಂದ ಏನೂ ಸಿಗುವುದಿಲ್ಲ ಎಂದು ಗೊತ್ತಿದ್ದರೂ ಅವುಗಳನ್ನು ನೋಡುತ್ತಾ ಕಾಲ ಕಳೆಯುತ್ತಾರೆ. ಸೋಷಿಯಲ್ ಮೀಡಿಯಾ ಅಡಿಕ್ಷನ್ ಹಾಗಿದೆ.
ಸೋಷಿಯಲ್ ಮೀಡಿಯಾವನ್ನು ತುಂಬಾ ಹೊತ್ತು ನೋಡುವವರು 6 ತಿಂಗಳು ಈ ರೀತ ನೋಡುತ್ತಿದ್ದರೆ ಖಿನ್ನತೆ ಜಾರುತ್ತಾರೆ ಎಂದು ಹೊಸ ಸಂಶೋಧನೆ ಹೇಳಿದೆ. ಜರ್ನಲ್ ಆಫ್ ಎಫೆಕ್ಟಿವ್ ಡಿಸಾರ್ಡರ್ಸ್ ಈ ಕುರಿತು ವರದಿ ಮಾಡಿದೆ.
ಹೆಚ್ಚು ಹೊತ್ತು ಸೋಷಿಯಲ್ ಮೀಡಿಯಾ ನೋಡಿದರೆ ಅಪಾಯ ಹೆಚ್ಚು
ದಿನದಲ್ಲಿ 5 ಗಂಟೆಗೂ ಅಧಿಕ ಸಮಯ ಸೋಷಿಯಲ್ ಮೀಡಿಯಾ ನೋಡುವುದಾದರೆ ಅಪಾಯ ತಪ್ಪಿದ್ದಲ್ಲ
ಯಾರು ದಿನದಲ್ಲಿ 300 ನಿಮಿಷಗಳಿಗಿಂತ ಅಧಿಕ ಸಮಯ ಸೋಷಿಯಲ್ ಮೀಡಿಯಾದಲ್ಲಿ ಕಳೆಯುತ್ತಾರೋ ಅವರಿಗೆ ಖಿನ್ನತೆಯ ಅಪಾಯ ಎರಡು ಪಟ್ಟು ಅಧಿಕವಿದೆ. ಈ ಅಧ್ಯಯನದಲ್ಲಿ18-30ವರ್ಷದೊಳಗಿನ 1000ಕ್ಕೂ ಅಧಿಕ ಜನ ಭಾಗವಹಿಸಿದ್ದರು.
ಸೋಷಿಯಲ್ ಮೀಡಿಯಾ ಮತ್ತು ಖಿನ್ನತೆ
2018ರಲ್ಲಿ ನಡೆಸಿದ ಅಧ್ಯಯನ ಯಾರು ರಾತ್ರಿ ಹೊತ್ತಿನಲ್ಲಿ ಸೋಷಿಯಲ್ ಮೀಡಿಯಾ ಹೆಚ್ಚಾಗಿ ಬಳಸುತ್ತಾರೋ ಅವರು ಖಿನ್ನತೆಗೆ ಜಾರುವ ಸಾಧ್ಯತೆ ಇದೆ ಎಂದು ಹೇಳಿದೆ.
* ಯಾರು ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚಿನ ಸಮಯ ಕಳೆಯುತ್ತಾರೆ ಅವರಿಗೆ ಒಂಟಿತನ ಕಾಡುವುದು ಎಂದು ಹೇಳಿದೆ.
ಚಿಕ್ಕ ಪ್ರಾಯದವರಿಗೆ ಅಪಾಯ ಹೆಚ್ಚು
ಸೋಷಿಯಲ್ ಮೀಡಿಯಾ ಬರುವ ಮುನ್ನ ಶಾಲೆಗೆ ಹೋದಾಗ ಕೆಲ ಸಹಪಾಠಿಗಳು ಕಾಲೆಳೆಯುವುದು ಮಾಡುತ್ತಿದ್ದರು, ಆದರೆ ಸೋಷಿಯಲ್ ಮೀಡಿಯಾದಲ್ಲಿ ಹೊಸ ರೀತಿಯಲ್ಲಿ ಅವಮಾನ ಮಾಡುವ ಸಾಧ್ಯತೆ ಇದೆ, ಅಂದರೆ ಅವರ ವೀಡಿಯೋಗಳನ್ನು ಹಾಕುವುದು ಅಥವಾ ಅವರನ್ನು ಇನ್ನು ಯಾವುದೋ ವಸ್ತುವಿಗೆ ಹೋಲಿಸಿ ತಮಾಷೆ ಮಾಡುವುದು ಮಾಡುತ್ತಾರೆ, ಇದರಿಂದ ಮನಸ್ಸಿಗೆ ತುಂಬಾನೇ ನೋವಾಗುವುದು.
ಅಲ್ಲದೆ ಸೋಷಿಯಲ್ ಮೀಡಿಯಾಗಳಿಂದ ಇತರ ಕೆಟ್ಟ ವಿಷಯಗಳ ಕಡೆ ಆಕರ್ಷಿತರಾಗುವ ಸಾಧ್ಯತೆ ಇದೆ, ಇವೆಲ್ಲಾ ಯುವ ಮನಸ್ಸಿನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಹೋಲಿಕೆ ಮಾಡುವ ಮೂಲಕ ಖಿನ್ನತೆಗೆ ಜಾರುತ್ತಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ಸ್ನೇಹಿತರು ಹೊಸ ಫೋಟೋಗಳನ್ನು ಹಾಕುವುದನ್ನು ನೋಡಿ ಅವರೊಂದಿಗೆ ತಮ್ಮನ್ನು ಹೋಲಿಕೆ ಮಾಡುತ್ತಾರೆ, ಅವರು ಖುಷಿಯಾಗಿದ್ದಾರೆ, ನನಗೆ ಮಾತ್ರ ಅವರಂತೆ ಬದುಕಲು ಸಾಧ್ಯವಾಗುತ್ತಿಲ್ಲ ಎಂದೆಲ್ಲಾ ಇಲ್ಲ ಸಲ್ಲದ ಹೋಲಿಕೆ ಮಾಡಿ ಖಿನ್ನತೆಗೆ ಜಾರುವವರ ಸಂಖ್ಯೆಯೇನೂ ಕಡಿಮೆಯಿಲ್ಲ.
ಸೋಷಿಯಲ್ ಮೀಡಿಯಾ ಹೇಗೆ ಬಳಸಬೇಕು?
ಸೋಷಿಯಲ್ ಮೀಡಿಯಾ ಸಂಪೂರ್ಣವಾಗಿ ಬಳಸಲೇಬಾರದು ಎಂದೇನು ಇಲ್ಲ, ಆದರೆ ಹೇಗೆ ಬಳಸಬೇಕೆಂದು ತಿಳಿದಿರಬೇಕು. ನಿಮ್ಮ ಮನಸ್ಸಿಗೆ ಡಿಸ್ಟರ್ಬ್ ಆಗುವ ಏನನ್ನೂ ನೋಡಲು ಹೋಗಬೇಡಿ ಹಾಗೂ ಎಷ್ಟು ಸಮಯ ಬಳಸಬೇಕು ಎಂದು ನೀವೇ ತೀರ್ಮಾನಿಸಬೇಕು. ಸೋಷಿಯಲ್ ಮೀಡಿಯಾ ಬಳಕೆಯನ್ನು ಕಡಿಮೆ ಮಾಡುತ್ತಾ, ಆ ಸಮಯವನ್ನು ಬೇರೆಕಡೆಗೆ ಕೊಟ್ಟರೆ ಮನಸ್ಸಿನ ಸ್ವಾಸ್ಥ್ಯ ಹೆಚ್ಚುವುದು.