ಚೆನ್ನೈ: ಬಿಜೆಪಿಯ ಮಹಿಳಾ ನಾಯಕಿಯರಾದ ಖುಷ್ಬು ಸುಂದರ್, ನಮಿತಾ, ಗೌತಮಿ ಮತ್ತು ಗಾಯತ್ರಿ ರಘುರಾಮ್ ವಿರುದ್ಧ ತಮ್ಮ ಪಕ್ಷದ ವಕ್ತಾರ ಸೈದಾಯಿ ಸಾದಿಕ್ ಅವರು ಮಾಡಿದ ಟೀಕೆಗಳಿಗೆ ಡಿಎಂಕೆ ನಾಯಕಿ ಕನಿಮೋಳಿ ಅವರು ಗುರುವಾರ ಕ್ಷಮೆಯಾಚಿಸಿದ್ದಾರೆ.
ಈ ನಾಲ್ವರು ನಾಯಕಿಯರನ್ನು 'ಐಟಂ'ಗಳು ಎಂದು ಕರೆದಿದ್ದ ಸಾದಿಕ್, ಅವರ ವಿರುದ್ಧ ಮತ್ತಷ್ಟು ಅಪಮಾನಕರ ಹೇಳಿಕೆಗಳನ್ನು ನೀಡಿದ್ದರು. ಜತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನೂ ಟೀಕೆ ಮಾಡಿದ್ದರು.
ಈ ವಿಷಯವಾಗಿ ಟ್ವೀಟ್ ಮಾಡಿದ್ದ ಖುಷ್ಬು, 'ಮಹಿಳೆಯರನ್ನು ಅವಮಾನಿಸುವುದು 'ಹೊಸ ದ್ರಾವಿಡ ಮಾದರಿ'ಯ ಭಾಗವೇ ಎಂದು ಪ್ರಶ್ನೆ ಮಾಡಿದ್ದರು.
'ಅವರು ಯಾವ ರೀತಿಯ ಸಂಸ್ಕಾರವನ್ನು ಹೊಂದಿದ್ದಾರೆ, ಸಮಾಜದಲ್ಲಿ ಎಂಥ ವಿಷದ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂಬುದು ಮಹಿಳೆಯರ ವಿರುದ್ಧದ ಪುರುಷರ ನಿಂದನೆಗಳಿಂದ ಗೊತ್ತಾಗುತ್ತದೆ. ಅಂಥವರು ತಮ್ಮನ್ನು ತಾವು ಕಲೈಜ್ಞರ್ (ಕರುಣಾನಿಧಿ) ಅವರ ಅನುಯಾಯಿಗಳು ಎಂದು ಕರೆದುಕೊಳ್ಳುತ್ತಾರೆ. ಇದು ಸಿಎಂ ಸ್ಟಾಲಿನ್ ಅವರ ಕಾಲದ 'ಹೊಸ ದ್ರಾವಿಡ ಮಾದರಿಯಾಗಿದೆಯೇ? ಇದೇ ನಿಯಮವೇ?' ಎಂದು ಖುಷ್ಬು ಪ್ರಶ್ನೆ ಮಾಡಿದ್ದಾರೆ. ಇದೇ ಟ್ವೀಟ್ ಅನ್ನು ಕನಿಮೋಳಿ ಅವರಿಗೂ ಟ್ಯಾಗ್ ಮಾಡಿದ್ದಾರೆ.
ಈ ಟ್ವೀಟ್ ಗಮನಿಸಿದ ಕನಿಮೊಳಿ ತಕ್ಷಣವೇ ಕ್ಷಮೆಯಾಚಿಸಿದ್ದಾರೆ.
'ನಾನೊಬ್ಬ ಮಹಿಳೆಯಾಗಿ ಮತ್ತು ಮನುಷ್ಯಳಾಗಿ ಅವರ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಇದನ್ನು ಯಾರೇ ಹೇಳಿದ್ದರೂ ಸಹಿಸಲು ಸಾಧ್ಯವಿಲ್ಲ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ. ನನ್ನ ನಾಯಕ ಸ್ಟಾಲಿನ್ ಮತ್ತು ನನ್ನ ಪಕ್ಷ ಡಿಎಂಕೆ ಇದನ್ನು ಎಂದೂ ಕ್ಷಮಿಸುವುದಿಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.
ಡಿಎಂಕೆ ವಿರುದ್ಧದ ಟೀಕೆಗೆ ಸಾದಿಕ್ ಹೇಳಿಕೆಯನ್ನು ಬಿಜೆಪಿ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು, ಕನಿಮೊಳಿ ಅವರು ವಿವಾದ ಶಮನಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಇದನ್ನು ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಹೆಣ್ಣುಮಕ್ಕಳನ್ನು 'ಐಟಂ' ಎಂದು ಕರೆಯುವುದು ಅವಹೇಳನಕಾರಿ ಎಂದು ಮುಂಬೈನ ವಿಶೇಷ ಕೋರ್ಟ್ ಕಿಡಿಕಾರಿದೆ. ಇದು ಲೈಂಗಿಕ ದುರುದ್ದೇಶದಿಂದ ಆಕೆಯನ್ನು ಗುರಿಯಾಗಿಸಿ ಅಪಮಾನಿಸುವುದಾಗಿದೆ ಎಂದು ಅಭಿಪ್ರಾಯಪಟ್ಟಿದೆ.