ನವದೆಹಲಿ: ಬ್ರಿಟನ್‌ನ ಕಂಪನಿಯೊಂದರ ಸಂವಹನ ಉಪಗ್ರಹಗಳನ್ನು ಅವುಗಳ ಕಕ್ಷೆಗಳಿಗೆ ಯಶಸ್ವಿಯಾಗಿ ಸೇರ್ಪಡೆ ಮಾಡಿರುವ ಇಸ್ರೊ, ಈಗ ಉಪಗ್ರಹಗಳ ಉಡ್ಡಯನಕ್ಕೆ ಸಂಬಂಧಿಸಿದ ಜಾಗತಿಕ ಮಾರುಕಟ್ಟೆ ಮೇಲೆ ಕಣ್ಣಿಟ್ಟಿದೆ.
ಸದ್ಯ, ಜಾಗತಿಕ ಬಾಹ್ಯಾಕಾಶ ಆರ್ಥಿಕತೆ ₹ 36 ಲಕ್ಷ ಕೋಟಿಯಷ್ಟಿದೆ.
ಈ ಪೈಕಿ, ಉಪಗ್ರಹಗಳ ಉಡ್ಡಯನ ಕ್ಷೇತ್ರದ ಪಾಲು ₹ 49 ಸಾವಿರ ಕೋಟಿಯಷ್ಟು ಎಂದು ಭಾರತೀಯ ಬಾಹ್ಯಾಕಾಶ ಸಂಘಟನೆ (ಐಎಸ್‌ಪಿಎ) ಹಾಗೂ ಅರ್ನ್ಸ್ಟ್ ಅಂಡ್ ಯಂಗ್ (ಇಅಂಡ್‌ವೈ) ಸಂಸ್ಥೆಗಳು ಬಿಡುಗಡೆ ಮಾಡಿರುವ ವರದಿಯಲ್ಲಿ ಹೇಳಲಾಗಿದೆ.
ಕಡಿಮೆ ದೂರದ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸುವಲ್ಲಿ ಈಗಾಗಲೇ ಯಶಸ್ಸು ಸಾಧಿಸಿರುವ ಇಸ್ರೊ, ಈಗ ಹೆಚ್ಚು ತೂಕದ ಉಪಗ್ರಹ ಅಥವಾ ಹಲವಾರು ಸಣ್ಣ ಉಪಗ್ರಹಗಳನ್ನು ಉಡ್ಡಯನ ಮಾಡುವ ಗುರಿ ಹೊಂದಿದೆ.
ಶ್ರೀಹರಿಕೋಟಾದಲ್ಲಿರುವ ಉಡ್ಡಯನ ಕೇಂದ್ರದಿಂದ ಭಾನುವಾರ ನಸುಕಿನಲ್ಲಿ ಎಲ್‌ವಿಎಂ-3 ರಾಕೆಟ್ ನೆರವಿನಿಂದ, ಬ್ರಿಟನ್‌ನ ಒನ್‌ವೆಬ್ ಕಂಪನಿಯ 36 ಉಪಗ್ರಹಗಳನ್ನು ಇಸ್ರೊ ಉಡ್ಡಯನ ಮಾಡುವ ಮೂಲಕ ಇಸ್ರೊ, ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೆರೆದಿಟ್ಟಿದೆ.
'ಮುಂದಿನ ವರ್ಷ ಫೆಬ್ರುವರಿಯಲ್ಲಿ ಮತ್ತೆ ಒನ್‌ವೆಬ್ ಕಂಪನಿಯ 36 ಉಪಗ್ರಹಗಳನ್ನು ಉಡ್ಡಯನ ಮಾಡುವ ಯೋಜನೆಯನ್ನು ರೂಪಿಸಲಾಗಿದೆ' ಎಂದು ಇಸ್ರೊ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.
ಮರುನಾಮಕರಣ: ಜಿಎಸ್‌ಎಲ್‌ವಿ ಮಾರ್ಕ್-3 (ಜಿಯೊಸಿಂಕ್ರನಸ್ ಸೆಟಲೈಟ್ ಲಾಂಚ್ ವೆಹಿಕಲ್)ನ ಹೆಸರನ್ನು 'ಲಾಂಚ್ ವೆಹಿಕಲ್ ಮಾರ್ಕ್-3' (ಎಲ್‌ವಿಎಂ-3) ಎಂದು ಇಸ್ರೊ ಬದಲಾಯಿಸಿದೆ.
ವಿವಿಧ ಬಗೆಯ ಕಕ್ಷೆಗಳಲ್ಲಿ ಉಪಗ್ರಹಗಳನ್ನು ಸೇರಿಸುವ ಈ ರಾಕೆಟ್‌ನ ಕಾರ್ಯವನ್ನು ಪರಿಗಣಿಸಿ ಈ ಕ್ರಮಕೈಗೊಳ್ಳಲಾಗಿದೆ ಎಂದು ಇಸ್ರೊ ತಿಳಿಸಿದೆ.
'ರಾಕೆಟ್ ಉಡಾವಣೆ ಕೇಂದ್ರ: ತಮಿಳುನಾಡಿನಲ್ಲಿ ಜಮೀನು ಸ್ವಾಧೀನ'
'ಸಂಸ್ಥೆಯ ಉದ್ದೇಶಿತ ರಾಕೆಟ್ ಉಡಾವಣಾ ಕೇಂದ್ರ ಸ್ಥಾಪನೆಗಾಗಿ ತಮಿಳುನಾಡಿನಲ್ಲಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ' ಎಂದು ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್ ಭಾನುವಾರ ಹೇಳಿದ್ದಾರೆ.
'ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಣಂ ಬಳಿ ಉದ್ದೇಶಿತ ಕೇಂದ್ರ ಸ್ಥಾಪಿಸುವುದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. ಉಡ್ಡಯನ ಕೇಂದ್ರದ ವಿನ್ಯಾಸ ಸಿದ್ಧವಿದೆ. ಸಂಸ್ಥೆಗೆ ಜಮೀನು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ' ಎಂದು ಹೇಳಿದ್ದಾರೆ.